ತುಮಕೂರು: ಕನಕದಾಸರು ಸುಮಾರು 500 ವರ್ಷಗಳ ಹಿಂದೆ ರಚಿಸಿದ ಕೀರ್ತನೆಗಳು ಇಂದಿಗೂ ಜೀವಂತವಾಗಿದ್ದು ನಮ್ಮ ಜೀವನದಲ್ಲಿ ಸ್ಪೂರ್ತಿಯನ್ನು ತುಂಬಿವೆ ಎಂದು ಹಿರಿಯ ಲೇಖಕಿ ಮತ್ತು ಶಾರದಾ ಪ್ರಕಾಶನದ ಸಂಪಾದಕಿ ಪ್ರೊ. ಕಮಲಾನರಸಿಂಹ ಹೇಳಿದರು.
ವಿವಿ ಕಲಾ ಕಾಲೇಜಿನಲ್ಲಿ ಬುಧವಾರ ಆಯೋಜಿಸಲಾಗಿದ್ದ ಕನಕದಾಸರ ವಿಚಾರ ಮಂಥನ ಮತ್ತು ಕನಕದಾಸ ಗೀತಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರನ್ನು ಅರ್ಥಮಾಡಿಕೊಳ್ಳಲು ದೈವಭಕ್ತಿಯ ದೃಷ್ಟಿಯಿಂದಷ್ಟೇ ಅಲ್ಲದೇ ಚಿಂತಕ, ಸಾಹಿತಿ, ಮತ್ತು ಸಮಾಜ ಸುಧಾರಕರನ್ನಾಗಿಯೂ ನೋಡಬೇಕು. ದಾಸರು ಹಾಡಿನ ಮೂಲಕ ಹೇಳಿರುವ ಸಾಮಾಜಿಕ ಸತ್ಯವನ್ನು ಎಲ್ಲರೂ ಅಳವಡಿಸಿಕೊಂಡು ಸಮಾಜದ ಕೊಳಕು ಮತ್ತು ಬಂಡಾಯವನ್ನು ವಿನಯದ ಸಂಪತ್ತಿನಿAದ ತೊಳೆಯಬೇಕಿದೆ ಎಂದರು.
ಕನಕದಾಸರ ವಿಚಾರಧಾರೆಯನ್ನು ಕುರಿತು ಮಾತನಾಡಿದ ಕಲಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಸ್. ಶಿವಣ್ಣ ಬೆಳವಾಡಿ, ರಾಮಧಾನ್ಯಚರಿತೆಯ ಪ್ರಸಂಗವನ್ನು ವಿಶ್ಲೇಷಿಸುವ ಮೂಲಕ ಇದು ಬರಿಯ ಚರಿತೆಯಲ್ಲ ವಿಚಾರಗಳನ್ನು ಪ್ರಾಯೋಗಿಕವಾಗಿ ಕಟ್ಟಿಕೊಟ್ಟಿದ್ದಾರೆ. ಸಾರ್ವಕಾಲಿಕ ಸತ್ಯವನ್ನು ತಮ್ಮ ಕೀರ್ತನೆಗಳ ಮೂಲಕ ಸಮಾಜಕ್ಕೆ ವಾಸ್ತವವನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ಕನಕದಾಸರು ಸಾಮಾಜದ ವೈದ್ಯರಾಗಿ ಇಲ್ಲಿದ್ದಂತಹ ಅದೆಷ್ಟೋ ಸಾಮಾಜಿಕ ಕಾಯಿಲೆಗಳನ್ನು ಅವರ ಕೀರ್ತನೆಗಳ ಮೂಲಕ ತೊಳೆದುಹಾಕಿದ್ದಾರೆ. ಈಗಿನ ವಿದ್ಯಾರ್ಥಿಗಳು ಮೊಬೈಲ್ ಮೋಹವನ್ನು ಬಿಟ್ಟು ಕೀರ್ತನೆಗಳ ಸಾರವನ್ನು ಅರಿಯಿರಿ ಎಂದು ಕಿವಿಮಾತನ್ನು ಹೇಳಿದರು.
ಗೀತಗಾಯನ ಸ್ಪರ್ಧೆಯಲ್ಲಿ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಬಿಂದು ಪ್ರಥಮ ಸ್ಥಾನವನ್ನು ಪಡೆದರೆ, ಕಲಾ ಕಾಲೇಜಿನ ದ್ವಿತೀಯ ವರ್ಷದ ಬಿಎ ವಿದ್ಯಾರ್ಥಿನಿ ಸುಪ್ರಿತಾ ದ್ವಿತೀಯ ಹಾಗೂ ಉಷಾ ತೃತೀಯ ಸ್ಥಾನ ತಮ್ಮದಾಗಿಸಿಕೊಂಡರು.ಕಾರ್ಯಕ್ರಮದಲ್ಲಿ ರಾಜ್ಯಶಾಸ್ತç ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಪಲ್ಲವಿ ಕುಸುಗಲ್ಲ ಪ್ರಾಸ್ತಾವಿಕ ನುಡಿಯನ್ನಾಡುವ ಮೂಲಕ ಸ್ವಾಗತಿಸಿದರು. ಸಹ ಪ್ರಾಧ್ಯಾಪಕರುಗಳಾದ ಡಾ. ಗಿರಿಜಾ ಕೆ. ಎಸ್., ಡಾ. ವೆಂಕಟರೆಡ್ಡಿ ರಾಮರೆಡ್ಡಿ ಇತರರು ಉಪಸ್ಥಿತರಿದ್ದರು.

(Visited 1 times, 1 visits today)