ಚಿಕ್ಕನಾಯಕನಹಳ್ಳಿ; ದಕ್ಕಲಿಗ ಅಲೆಮಾರಿಗಳು ವಾಸವಿರುವ ಪಟ್ಟಣದ ಗಾಂಧಿನಗರಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ ನಾಗಲಕ್ಷ್ಮಿ ಚೌಧರಿ’ಯವರು ಶುಕ್ರವಾರ ಭೇಟಿ ನೀಡಿ ಅಲ್ಲಿನ ಮಹಿಳೆ ಮತ್ತು ಮಕ್ಕಳ ಕುಂದು-ಕೊರತೆ ಬಗ್ಗೆ ಪರಿಶೀಲನೆ ನಡೆಸಿ, ಸ್ಥಳೀಯ ಆಡಳಿತದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಶುಕ್ರವಾರ ಬೆಳಗ್ಗೆ ತಾಲ್ಲೂಕಿನ ಹುಳಿಯಾರು ಪಟ್ಟಣದ ಕನಕ ವೃತ್ತದಲ್ಲಿ ರಾಷ್ಟ್ರೀಯ ಸಂತ-ಕವಿ ಕನಕದಾಸರ ಪುತ್ಥಳಿಯ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು, ತಾಲ್ಲೂಕಿನ ಅಲೆಮಾರಿಗಳ ಕುಂದು-ಕೊರತೆಗಳ ಬಗ್ಗೆ ಖುದ್ದಾಗಿ ತೆರಳಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿದರು.
ಹುಳಿಯಾರು ಪಟ್ಟಣದ ಕೆರೆ ದಂಡೆಯಲ್ಲಿ ವಾಸವಿರುವ ಅಲೆಮಾರಿಗಳು ಮತ್ತು ಬಡ ಕುಟುಂಬಗಳ ಪರಿಸ್ಥಿತಿ ಕಂಡು, ಅಧಿಕಾರಿಗಳಿಗೆ ಹಲವು ಸಲಹೆ-ಸೂಚನೆಗಳನ್ನು ಸ್ಥಳದಲ್ಲೇ ನೀಡಿದರು. ಅಲ್ಲಿನ ಮಕ್ಕಳು ಮತ್ತು ಮಹುಳೆಯರ ಜೊತೆ ಸ್ನೇಹ-ಸಲುಗೆಯಿಂದ ಒಳಗೊಂಡ ಮಹಿಳಾ ಆಯೋಗದ ಅಧ್ಯಕ್ಷರು, ಅಲ್ಲಿನ ಎಲ್ಲ ಬಡವರಿಗೂ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಅವರ ಜೊತೆ ಪ್ರಗತಿಪರ ಚಿಂತಕ ಹಾಗೂ ಯುವನಾಯಕ ನಿಕೇತ್ ರಾಜ್ ಮೌರ್ಯ ಕೂಡ ಇದ್ದರು. ನಂತರ, ಸ್ವತಃ ವೃತ್ತಿಯಿಂದ ವೈದ್ಯೆಯಾಗಿರುವ ಡಾ ನಾಗಲಕ್ಷ್ಮಿ ಚಾಧರಿಯವರು, ನೇರ ಅಲ್ಲಿಂದು ಹುಳಿಯಾರು ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟು ಅಲ್ಲಿನ ಅವ್ಯವಸ್ಥೆಗಳನ್ನು ಕಂಡು ಬೆಚ್ಚಿಹೋದರು. ಆಸ್ಪತ್ರೆಯ ಶುಶ್ರೂಷಕಿಯರಿಗೆ (ನರ್ಸು) ಸ್ಟೆರಲೈಜ ಮಾಡುವ ವಿಧಾನವೇ ಗೊತ್ತಿಲ್ಲದಿದ್ದನ್ನು ಕಂಡು, ಹೌಹಾರಿದರು. ಅಲ್ಲಿನ ಕೊಠಡಿಗಳು, ಸ್ಟೋರ್ ರೂಮುಗಳು, ಚಿಕಿತ್ಸಾ ಕೊಠಡಿಯಲ್ಲಿನ ದುರ್ಗಂಧ ಹಾಗೂ ಗಲೀಜನ್ನು ಕಂಡು ಸೇವಾನಿರತ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲಿ ಪ್ರಭಾರ ಕಾರ್ಯ ನಿರ್ವಹಿಸುತ್ತಿರುವ ವೈದ್ಯ ಡಾ.ಮಧುರವರನ್ನು ಉದ್ದೇಶಿಸಿ ಮಹಿಳಾ ಆಯೋಗದ ಅಧ್ಯಕ್ಷರು ಸ್ಪಷ್ಟ ಎಚ್ಚರಿಕೆಗಳನ್ನು ನೀಡಿದರು. ತಹಸೀಲ್ದಾರ್ ಕೆ ಪುರಂದರ್’ರವರ ಬಳಿ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.
ಅಲ್ಲಿಂದ ನೇರ ಚಿಕ್ಕನಾಯಕನಹಳ್ಳಿ ಪಟ್ಟಣದ ಗಾಂಧಿನಗರದಲ್ಲಿ ವಾಸವಿರುವ ದಕ್ಕಲಿಗ ಜನಾಂಗದ ಅಲೆಮಾರಿಗಳ ಕಾಲೊನಿಗೆ ಸಂಜೆ 7.00 ಗಂಟೆಯಷ್ಟೊತ್ತಿಗೆ ಭೇಟಿಕೊಟ್ಟ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮಿ ಚೌಧರಿಯವರು, ಅಲ್ಲಿನ ಮಹಿಳೆಯರ ಮೂಲಭೂತ ಹಕ್ಕಾದ ಶೌಚಾಲಯ ವ್ಯವಸ್ಥೆಯನ್ನೇ ಮಾಡಿಕೊಡಲಾಗದ ಪುರಸಭೆಯ ಮುಖ್ಯಾಧಿಕಾರಿ ಮಂಜಮ್ಮನವರನ್ನು ಕರೆ ಮಾಡಿ ಛೀಮಾರಿ ಹಾಕಿದರು.
(Visited 1 times, 1 visits today)