ಚಿಕ್ಕನಾಯಕನಹಳ್ಳಿ : ತಮ್ಮ ಹುಟ್ಟುಹಬ್ಬದ ದಿನವನ್ನು ಗಿಡ ನೆಡುವ ಮೂಲಕ ನೆನಪಿಸಿಕೊಂಡ ಅಧ್ಯಾಪಕಿ ಬಿ ಎಸ್ ಸಾಹೇರಾ ಬಾನು, ಬುಧವಾರದಂದು ಕಾತ್ರಿಕೆಹಾಲ್-ತೀರ್ಥಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ 70 ಗಿಡಗಳನ್ನು ನೆಡುವುದರ ಮೂಲಕ ಪರಿಸರ ಕಾಳಜಿಗೆ ಮಾದರಿಯಾದರು.
ಕಾತ್ರಿಕೆಹಾಲ್ ಗ್ರಾಮದ ಡಾ.ಅಂಬೇಡ್ಕರ್ ಪ್ರೌಢಶಾಲೆಯ ಅಧ್ಯಾಪಕಿಯಾದ ಇವರು, ಅಧ್ಯಾಪನ ವೃತ್ತಿಯ ಜೊತೆಗೆ ಒಂದಿಲ್ಲೊAದು ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿರುತ್ತಾರೆ. ಈ ಹಿಂದೆ, ಕೆಂಪರಾಯನಹಟ್ಟಿಯ ಮಾರ್ಗದಲ್ಲಿ ಬಸ್ ಸೌಕರ್ಯವಿಲ್ಲದೆ ನಿತ್ಯ ಪರದಾಡುತ್ತಿದ್ದ ಶಾಲಾ ಮಕ್ಕಳಿಗಾಗಿ ಸ್ಥಳೀಯ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಬಳಿ ಮನವಿ ಸಲ್ಲಿಸಿದ್ದರು. ಅವರಿಂದ ಏನೂ ಪ್ರಯೋಜನವಾಗದ ಕಾರಣ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದವರೆಗೂ ಬಸ್ ಸೌಕರ್ಯಕ್ಕಾಗಿ ತಮ್ಮ ಮನವಿಯನ್ನು ಕೊಂಡೊಯ್ದರು. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಆದೇಶದ ಮೇರೆಗೆ ಅಂತಿಮವಾಗಿ ಆ ಮಾರ್ಗಕ್ಕೆ ಬಸ್ ಸೌಕರ್ಯ ಒದಗಿತು.
ಕಾತ್ರಿಕೆಹಾಲ್ ಗ್ರಾಮದ ಡಾ ಅಂಬೇಡ್ಕರ್ ಪ್ರೌಢಶಾಲೆಯ ಅಧ್ಯಾಪಕಿಯಾಗಿ ಕಳೆದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬಿ ಎಸ್ ಸಾಹೇರಾ ಬಾನು, ತಮ್ಮ ಅಧ್ಯಾಪನವೃತ್ತಿಯ ಜೊತೆ ಜೊತೆಯಲ್ಲೇ ಸುತ್ತಲಿನ ಪರಿಸರ, ಸಾಮಾಜಿಕ ಮತ್ತು ಸಾಂಪ್ರದಾಯಿಕ ಮೌಢ್ಯ, ಕಂದಾಚಾರ ಹಾಗೂ ಮಹಿಳೆಯರ ಮೇಲಿನ ಶೋಷಣೆಯ ವಿರುದ್ಧ ಪ್ರತಿಭಟಿಸುವ ದಿಟ್ಟತನ ರೂಢಿಸಿಕೊಂಡಿರುವವರು. ಬಾಲ್ಯದಿಂದಲೂ ಬಂಡಾಯಗಾರ್ತಿಯಾಗೇ ಬೆಳೆದುಬಂದ ಸಾಹೇರಾ ಬಾನು’ರವರಿಗೆ ಅವರ ತಾಯಿಯೇ ಪ್ರೇರಣೆ ಮತ್ತು ಸ್ಫೂರ್ತಿ. ಇವರ ತಾಯಿ ಕೂಡ ಇದೇ ಅಧ್ಯಾಪನ ವೃತ್ತಿಯಲ್ಲಿದ್ದವರು. ಮೂವತ್ತು ವರ್ಷಗಳಿಗೂ ಹೆಚ್ಚುಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಅವರು, ಈಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ತೀರ್ಥಪುರ-ಕಾತ್ರಿಕೆಹಾಲ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ 70 ಗಿಡಗಳನ್ನು ನೆಡುವುದರ ಮೂಲಕ ಹುಟ್ಟುಹಬ್ಬದ ದಿನವನ್ನು ಆಚರಿಸಿಕೊಳ್ಳುವ ಸಮಾಜಮುಖಿ ಆಯಾಮಕ್ಕೆ ಇವರು ಮಾದರಿಯಾಗಿದ್ದಾರೆ. ಇವರನ್ನು ಗೌರವ ಮತ್ತು ಮೆಚ್ಚಿಗೆಯಿಂದ ಕಾಣುವ ಗ್ರಾಮಸ್ಥರು ನಮ್ಮೂರಿಗೆ ಅತ್ತ್ಯುತ್ತಮ ಶಿಕ್ಷಕಿಯೊಬ್ಬರು ಸಿಕ್ಕಿರುವುದರಿಂದ ‘ನಮಗೆ ನಮ್ಮ ಮಕ್ಕಳ ಉಜ್ವಲ ಭವಿಷ್ಯದ ಬಗ್ಗೆ ಚಿಂತಿಲ್ಲ’ ಎಂದು ಪ್ರಶಂಸಿಸುತ್ತಾರೆ. ತಮ್ಮ ಮತ್ತು ತಮ್ಮ ಮಗಳ ಹುಟ್ಟುಹಬ್ಬದ ಪ್ರಯುಕ್ತ 100 ಗಿಡಗಳನ್ನು ನೆಟ್ಟು ಅವನ್ನು ಪೋಷಿಸಿ ಬೆಳೆಸುವ ಸಂಕಲ್ಪ ಇಟ್ಟುಕೊಂಡಿದ್ದ ಅಧ್ಯಾಪಕಿ ಸಾಹೇರಾ ಬಾನು, ಕಾಲೇಜು ಆವರಣದಲ್ಲಿ ಜಾಗ ಸಾಲದೇ ಬಂದದ್ದಕ್ಕೆ ಕೇವಲ 70 ಗಿಡಗಳನ್ನು ನೆಟ್ಟು ತೃಪ್ತರಾದರು. ಸಾಮಾಜಿಕ ವಲಯ ಅರಣ್ಯ ಇಲಾಖೆಯ ನರ್ಸರಿಯಿಂದ ಪಡೆದುತಂದಿದ್ದ ಆರೋಗ್ಯವಂತ ಗಿಡಗಳನ್ನು ಬುಧವಾರ ಬೆಳಗ್ಗೆ ಕಾತ್ರಿಕೆಹಾಲ್ ಗ್ರಾಮದ ಹಳೆಯ ವಿದ್ಯಾರ್ಥಿಗಳ ಸಹಾಯ ಪಡೆದು, ಕಾಲೇಜು ಆವರಣದಲ್ಲಿನ ಖಾಲಿ ಜಾಗದಲ್ಲಿ ನೆಟ್ಟು ಗಿಡಗಳಿಗೆ ನೀರುಣಿಸಿದರು. ಈ ಸಂದರ್ಭದಲ್ಲಿ, ಗ್ರಾಮದ ಹಿರಿಯರಾದ ಮೂರ್ತಪ್ಪ, ಕಾಲೇಜಿನ ಪ್ರಾಂಶುಪಾಲ ಶಿವರುದ್ರಪ್ಪ, ಗ್ರಾಮದ ಮಾರಪ್ಪ ಮತ್ತು ಪರಮೇಶ್, ವಿನಯ್, ಮಾರುತಿ, ಮಣಿಕಂಠ, ಮದನ, ಪ್ರಸನ್ನ, ಸಂದೀಪ, ಯಶ್ವಂತ, ಸಂತೋಷ, ರಮೇಶ, ಗಿರೀಶ ಸೇರಿದಂತೆ ಇನ್ನೂ ಹತ್ತಾರು ಮಂದಿ ಹಳೆಯ ವಿದ್ಯಾರ್ಥಿಗಳು ಗಿಡ ನೆಡುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

(Visited 1 times, 1 visits today)