ಹುಳಿಯಾರು: ಹೆಚ್‌ಐವಿ ಎಂಬ ವೈರಸ್ ಮಾನವ ದೇಹದೊಳಗೆ ಸೇರಿ ದೇಹದ ರಕ್ಷಣಾ ವ್ಯವಸ್ಥೆಯಾದ ಬಿಳಿ ರಕ್ತ ಕಣಗಳ ಮೇಲೆ ದಾಳಿ ಮಾಡುವುದರಿಂದ ಶರೀರದ ರೋಗನಿರೋಧಕ ಶಕ್ತಿಯು ಕ್ರಮೇಣ ಕುಗ್ಗುತ್ತದೆ. ಇದರಿಂದ ಒಂದೊAದೇ ಕಾಯಿಲೆಗಳು ಪ್ರಾರಂಭವಾಗುತ್ತದೆ. ಚಿಕಿತ್ಸೆ ಪಡೆದರೂ ಮತ್ತೆ ಮರುಕಳಿಸುತ್ತದೆ ಹಾಗೂ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗುವುದಿಲ್ಲ ಎಂದು ಚಿಕ್ಕನಾಯಕನಹಳ್ಳಿಯ ಐಸಿಟಿಸಿ ಆಪ್ತಸಮಾಲೋಚಕರಾದ ನವೀನ್ ತಿಳಿಸಿದರು.
ಹುಳಿಯಾರು-ಕೆಂಕೆರೆ ಬಿ.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕ ಹಾಗೂ ಐಕ್ಯುಎಸಿ ಸಹಯೋಗದೊಂದಿಗೆ ಶುಕ್ರವಾರ ಏರ್ಪಡಿಸಿದ್ದ ಹೆಚ್.ಐ.ವಿ – ಏಡ್ಸ್ ಕುರಿತು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಚ್‌ಐವಿಯು ಒಬ್ಬರಿಂದ ಒಬ್ಬರಿಗೆ ಹರಡದಂತೆ ತಡೆಯಲು ಮುನ್ನೆಚ್ಚರಿಕೆಯ ಕ್ರಮಗಳೆಂದರೆ ಮರುಬಳಕೆ ಮಾಡದಂತಹ ಸೂಜಿ ಸಿರಿಂಜುಗಳನ್ನು ಬಳಸುವುದು, ನೋಂದಾಯಿತ ರಕ್ತ ನಿಧಿಯಿಂದಲೇ ರಕ್ತವನ್ನು ಪಡೆದುಕೊಳ್ಳುವುದು, ಅಪಘಾತವಾಗದಂತೆ ಎಚ್ಚರ ವಹಿಸುವುದು, ದುಶ್ಚಟಗಳಿಗೆ ಬಲಿಯಾಗದಿರುವುದು, ಸುರಕ್ಷಿತ ಲೈಂಗಿಕ ಸಂಪರ್ಕವನ್ನು ಹೊಂದುವುದು ಹಾಗೂ ಪೌಷ್ಟಿಕ ಆಹಾರ ಪದ್ಧತಿಯ ಮೂಲಕ ದೇಹದ ರೋಗ ನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಬೇಕು ಎಂದರು. ಮುಖ್ಯ ಅತಿಥಿಗಳಾದ ಬಾಲಕೃಷ್ಣ ಮಾತನಾಡಿ ಅಸಾಂಕ್ರಾಮಿಕ ರೋಗಗಳಾದ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ನಂತಹ ಕಾಯಿಲೆಗಳ ಕುರಿತು ಮಾಹಿತಿ ಹಾಗೂ ಅವುಗಳಿಂದ ಹೇಗೆ ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕು ಎಂಬುದನ್ನು ತಿಳಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ. ಯೋಗೀಶ್ ಬಿ ಮಾತನಾಡಿ ಯುವಜನತೆಯು ಸಂಕುಚಿತ ಮನೋಭಾವವಿಲ್ಲದೆ ಆರೋಗ್ಯ ಶಿಕ್ಷಣ, ಲೈಂಗಿಕ ಶಿಕ್ಷಣ ಪಡೆದುಕೊಳ್ಳಬೇಕು. ದೈಹಿಕ ಚಟುವಟಿಕೆ, ಸಮತೋಲಿತ ಆಹಾರ ಹಾಗೂ ವಿಶ್ರಾಂತಿ ಇವುಗಳ ಮೂಲಕ ಆರೋಗ್ಯ ಪೂರ್ಣ ಜೀವನ ನಡೆಸಬಹುದು ಎಂದರು. ರಾಜ್ಯಶಾಸ್ತç ವಿಭಾಗದ ಉಪನ್ಯಾಸಕರಾದ ತಿಪ್ಪೇಸ್ವಾಮಿ ಮಾತನಾಡಿ ತನ್ನ ಆರೋಗ್ಯದ ಬಗ್ಗೆ ಲಕ್ಷ÷್ಯ ವಹಿಸುವವನೇ ನಿಜವಾದ ಶ್ರೀಮಂತ. ನಮ್ಮಲ್ಲಿರುವ ತಪ್ಪು ಕಲ್ಪನೆಗಳನ್ನು ನಿವಾರಿಸಬೇಕು. ಯುವ ಜನತೆ ಶಿಕ್ಷಣ ಹಾಗೂ ಸಮುದಾಯದ ನಡುವಿನ ಕೊಂಡಿ ಇದ್ದ ಹಾಗೆ. ಇಂತಹ ಕಾರ್ಯಕ್ರಮಗಳ ಮೂಲಕ ಪಡೆದ ಅರಿವು ಸಮಾಜದಲ್ಲಿ ಆರೋಗ್ಯಕರ ಜೀವನಕ್ಕೆ ಸಹಕಾರಿಯಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ವೀರಣ್ಣ ಎಸ್.ಸಿ. ಮಾತನಾಡಿ ಹೆಚ್‌ಐವಿ ಹಾಗೂ ಏಡ್ಸ್ ಕುರಿತು ಜಾಗೃತಿಯನ್ನು ಬೆಳೆಸಿಕೊಂಡು ಆರೋಗ್ಯಕರವಾದ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರಲ್ಲದೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡರೆ ಏಡ್ಸ್ ಮುಕ್ತ ಸಮಾಜ ನಿರ್ಮಿಸಬಹುದು ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಡಾ.ಸಂಗೀತಾ ಪಿ. ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ದ್ವಿತೀಯ ಬಿಕಾಂ ನ ವಿದ್ಯಾರ್ಥಿನಿಯರಾದ ರಂಜಿತಾ ಕೆ ಮತ್ತು ತಂಡ ಪ್ರಾರ್ಥಿಸಿದರು. ಲತಾ ಸಿ ಅವರು ಸ್ವಾಗತಿಸಿ, ತಸ್ಮಿಯ ಬಾನು ವಂದಿಸಿದರು. ಮೌನಶ್ರೀ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಐಕ್ಯೂಎಸಿ ಸಂಚಾಲಕರಾದ ಡಾ.ಸರಸ್ವತಿ ಕೆ.ಬಿ ಹಾಗೂ ಬೋಧಕ ಬೋಧಕೇತರ ವೃಂದದವರು ಭಾಗವಹಿಸಿ ಯಶಸ್ಸಿಗೆ ಸಹಕರಿಸಿದರು.

(Visited 1 times, 1 visits today)