ತುಮಕೂರು: ನಗರದಲ್ಲಿ ಸುಸಜ್ಜಿತ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣವಾಗಿದೆ. ಆದರೆ ನಿಲ್ದಾಣದ ಎದುರು ಅಶೋಕ ರಸ್ತೆಯ ಸಂಚಾರ ವ್ಯವಸ್ಥೆ ಸುಗಮವಾಗಿಲ್ಲ, ಸುರಕ್ಷಿತವಾಗಿಯೂ ಇಲ್ಲ. ರಸ್ತೆಯಲ್ಲಿ ಆಟೋಗಳು, ಖಾಸಗಿ ವಾಹನಗಳ ಅಡ್ಡಾದಿಡ್ಡಿ ಸಂಚಾರ, ರಸ್ತೆಬದಿ ಅವೈಜ್ಞಾನಿಕವಾಗಿ ವಾಹನ ನಿಲುಗಡೆ ಮಾಡುವುದರಿಂದ ಇಲ್ಲಿ ಸಂಚಾರ ಮಾಡುವುದು ನರಕಯಾತನೆಯಾಗಿದೆ.
ಬಸ್‌ನಿಲ್ದಾಣದ ಎದುರು ಅಶೋಕ ರಸ್ತೆಯ ಎರಡೂ ಬದಿಯಲ್ಲಿ ದಿನವಿಡೀ ವಾಹನಗಳು ಭರ್ತಿಯಾಗಿ ನಿಂತಿರುತ್ತವೆ. ಈ ರಸ್ತೆಯ ಅಂಗಡಿಗಳಿಗೆ ಬರುವ ಗ್ರಾಹಕರು ತಮ್ಮ ವಾಹನ ನಿಲುಗಡೆ ಮಾಡಲು ಜಾಗವೇ ಇಲ್ಲದಂತಾಗಿದೆ. ಇದರಿಂದ ಇಲ್ಲಿನ ವ್ಯಾಪಾರಸ್ಥರ ವ್ಯವಹಾರಕ್ಕೂ ತೊಂದರೆಯಾಗಿದೆ. ಗ್ರಾಹಕರು ದೂರದಲ್ಲೆಲ್ಲೂ ವಾಹನ ನಿಲ್ಲಿಸಿ ಬರುವಂತಾಗಿದೆ. ರಸ್ತೆಬದಿ ಮಾತ್ರವಲ್ಲದೆ, ಫುಟ್‌ಪಾತ್ ಮೇಲೂ ವಾಹನ ನಿಲುಗಡೆ ಮಾಡಿ ಪಾದಚಾರಿಗಳ ಓಡಾಟಕ್ಕೂ ತೊಂದರೆಯಾಗಿದೆ. ತಮ್ಮ ವೃತ್ತಿ, ವ್ಯವಹಾರಗಳಿಗೆ ಬೆಂಗಳೂರು ಮತ್ತಿತರ ಊರುಗಳಿಗೆ ನಿತ್ಯ ಹೋಗಿಬರುವವರು ಈ ರಸ್ತೆ ಬದಿ, ಫುಟ್‌ಪಾತ್‌ನಲ್ಲಿ ವಾಹನ ನಿಲ್ಲಿಸಿ ಹೋಗುತ್ತಾರೆ. ಹೀಗಾಗಿ ಇಲ್ಲಿನ ಅಂಗಡಿಗಳಿಗೆ ವ್ಯವಹಾರಕ್ಕೆ ಬರುವವರಿಗೆ ವಾಹನ ನಿಲುಗಡೆ ಮಾಡಲು ಜಾಗ ಇರುವುದಿಲ್ಲ.
ಬಸ್ ಪ್ರಯಾಣಿಕರ ವಾಹನಗಳ ನಿಲುಗಡೆಗೆ ಬಸ್ ನಿಲ್ದಾಣದ ನೆಲಮಹಡಿಯಲ್ಲಿ ಪಾರ್ಕಿಂಗ್ ಸೌಲಭ್ಯವಿದೆ. ಆದರೆ ಪಾರ್ಕಿಂಗ್ ಶುಲ್ಕು ದುಬಾರಿ ಎನ್ನಲಾಗಿದೆ. ದ್ವಿಚಕ್ರ ವಾಹನ ನಿಲುಗಡೆಗೆ 5 ರೂ. ಶುಲ್ಕ ಎಂದು ಬಸ್ ನಿಲ್ದಾಣದ ಎದುರಿಗೆ ದೊಡ್ಡ ದೊಡ್ಡ ಬೋರ್ಡ್ಗಳನ್ನು ಹಾಕಲಾಗಿದೆ. ಆದರೆ, ಬೋರ್ಡ್ ನೋಡಿ ಒಳ ಹೋಗಿ ತಮ್ಮ ವಾಹನ ನಿಲುಗಡೆ ಮಾಡಿ ವಾಪಸ್ ತರುವಾಗ ಪಾರ್ಕಿಂಗ್ ಶುಲ್ಕವನ್ನು 20-25 ರೂ. ವಸೂಲಿ ಮಾಡುತ್ತಾರೆ. 5 ರೂ. ಶುಲ್ಕ ಎಂದು ಹೋದವರಿಗೆ ದುಬಾರಿ ಶುಲ್ಕದ ಅನುಭವವಾಗುತ್ತದೆ. ಹೀಗಾಗಿ ಅಲ್ಲಿ ಒಮ್ಮೆ ವಾಹನ ಪಾರ್ಕಿಂಗ್‌ಗೆ ಮಾಡಿ ಅನುಭವವಾಗಿರುವವರು ಮತ್ತೆ ಹೋಗಲು ಹಿಂಜರಿಯುತ್ತಾರೆ. ಅಂತಹವರು ರಸ್ತೆ ಬದಿ ವಾಹನ ನಿಲ್ಲಿಸಿ ಹೋಗುತ್ತಾರೆ. ಬಸ್ ನಿಲ್ದಾಣದ ಪಾರ್ಕಿಂಗ್ ಗುತ್ತಿಗೆದಾರರು 5 ರೂ. ಪಾರ್ಕಿಂಗ್ ಶುಲ್ಕ ಎಂದು ಬೋರ್ಡ್ ಹಾಕಿ ವಾಹನ ಸವಾರರನ್ನು ಆಕರ್ಷಿಸುವ ಪ್ರಯತ್ನ ಮಾಡಿ ಅವರನ್ನು ದಾರಿ ತಪ್ಪಿಸುತ್ತಾರೆ ಎನ್ನಲಾಗಿದೆ. ಜೊತೆಗೆ, ತಮ್ಮವರನ್ನು ಬಸ್ ಹತ್ತಿಸಲೆಂದು ಕರೆತರುವವರು ವಾಹನ ನಿಲ್ಲಿಸಲೂ ನಿಲ್ದಾಣದ ಬಳಿ ರಸ್ತೆ ಬದಿ ಸ್ಥಳವಿಲ್ಲ, ಅವರೂ ಪಾರ್ಕಿಂಗ್‌ನಲ್ಲಿ ನಿಲ್ಲಿಸಿ ಶುಲ್ಕ ತೆರಬೇಕಾಗುತ್ತದೆ.
ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಈ ಸಮಸ್ಯೆ ಬಗ್ಗೆ ಗಮನಹರಿಸಿ ವಾಹನಗಳ ದುಬಾರಿ ಪಾರ್ಕಿಂಗ್ ಶುಲ್ಕವನ್ನು ಪರಿಷ್ಕರಿಸಿ ಕಡಿಮೆ ಮಾಡಬೇಕು ಹಾಗೂ ಬಸ್ ಪ್ರಯಾಣಿಕರು ರಸ್ತೆ ಬದಿ ವಾಹನಗಳನ್ನು ನಿಲ್ಲಿಸದಂತೆ ಕ್ರಮ ತೆಗೆದುಕೊಂಡು ಅಶೋಕ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕಾಗಿದೆ.

(Visited 1 times, 1 visits today)