ತುಮಕೂರು: ವಿಕಲ ಚೇತನರು ತಮ್ಮ ವಿಕಲತೆಯನ್ನು ಮೆಟ್ಟಿನಿಂತು ಆತ್ಮಬಲ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ಛಲ ರೂಢಿಸಿಕೊಳ್ಳಿ. ತಮ್ಮ ಅಂಗವೈಫಲ್ಯವನ್ನು ಸವಾಲಾಗಿ ಸ್ವೀಕರಿಸಿ ಸಾಧಿಸಿರಿ. ಈ ಪ್ರಯತ್ನದಲ್ಲಿ ಹಲವರು ಯಶಸ್ವಿಯಾಗಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಮಹಾಲಕ್ಷಿö್ಮ ಬಡಾವಣೆಯ ದಾರಿದೀಪ ಟ್ರಸ್ಟ್ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ, ದೇವರು ಒಂದನ್ನು ಕಿತ್ತುಕೊಂಡರೆ ಇನ್ನೊಂದನ್ನು ಕೊಡುತ್ತಾನೆ ಎನ್ನುವಂತೆ ವಿಕಲಚೇತನರ ಅಂಗವನ್ನು ಕಿತ್ತುಕೊಂಡರೆ ಅವರಲ್ಲಿ ಅಗಾಧವಾದ ಬುದ್ಧಿಶಕ್ತಿ, ನೈತಿಕ ಬಲವನ್ನು ನೀಡಿರುತ್ತಾನೆ. ಅದರ ಮೂಲಕ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ವಿಕಲ ಚೇತನರು ಯಾರಿಗೂ ಹೊರೆಯಲ್ಲ, ಅವರಿಂದ ಸಮಸ್ಯೆಯೂ ಇಲ್ಲ. ಆದರೆ ಎಲ್ಲಾ ಅಂಗಗಳು ಚೆನ್ನಾಗಿದ್ದು ಮನಸನ್ನು ವಿಕೃತಗೊಳಿಸಿಕೊಂಡಿರುವ ಮನೋವಿಕಲರಿಂದ ಸಮಾಜಕ್ಕೆ ಅಪಾಯವೇ ಹೆಚ್ಚು. ಅನುಕೂಲ ಇರುವವರು ವಿಕಲಚೇತನರಿಗೆ ನೆರವಾಗಬೇಕು. ತುಮಕೂರಿನಲ್ಲಿ ಸಹಾಯಾಸ್ತ ಚಾಚುವವರಿಗೆ ಕೊರತೆಯಿಲ್ಲ, ಸಹಾಯದ ಮೂಲಕ ಅವರ ಆತ್ಮವಿಶ್ವಾಸ ಹೆಚ್ಚಿಸಲಿ, ಪರಸ್ಪರ ನೆರವಾಗುವ ಮೂಲಕ ಸಮಾಜದಲ್ಲಿ ಸೌಹಾರ್ದತೆ, ಪ್ರೀತಿ, ವಿಶ್ವಾಸ ಬೆಳೆಸಿಕೊಳ್ಳಬೇಕು. ಧರ್ಮದ ಸಿದ್ಧಾಂತವೂ ಇದೇ ಆಗಿದೆ ಎಂದು ಹೇಳಿದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ದಾರಿದೀಪ ಟ್ರಸ್ಟ್ನ ಸೇವಾಕಾರ್ಯ ಶ್ಲಾಘನೀಯ, ವಿಕಲಚೇತನರಾಗಿದ್ದರೂ ಆತ್ಮವಿಶ್ವಸದಿಂದ ಬದುಕು ಕಟ್ಟಿಕೊಂಡು ಸಂಸ್ಥೆ ಸ್ಥಾಪಿಸಿ ಅಂಧರ ಬದುಕಿಗೆ ಬೆಳಕಾಗಿರುವ ಸಂಸ್ಥೆಯ ಡಾ.ಶಿವಕುಮಾರ್ ಮತ್ತು ಅವರ ಬಳಗದ ಸೇವೆ ಶ್ಲಾಘನೀಯ. ಸಂಸ್ಥೆ ನಡೆಯುತ್ತಿರುವ ಈ ಕಟ್ಟಡವನ್ನು ಖರೀದಿಸಿ ಟ್ರಸ್ಟ್ ಹೆಸರಿಗೆ ನೀಡಬೇಕು, ಇದಕ್ಕೆ ದಾನಿಗಳು ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಸಂಸ್ಥೆಯ ಮಕ್ಕಳಿಗೆ ಪಠ್ಯಪರಿಕರ ಹಾಗೂ ವಿವಿಧ ಸಾಮಗ್ರಿಗಳನ್ನು ದಾನಿಗಳು ನೀಡಿ ನೆರವಾದರು. ಜೊತೆಗೆ ಈ ಸಾಲಿನಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ವಿವಿಧ ಸಹಕಾರ ಸಂಘಗಳ ಮುಖಂಡರನ್ನು ಸನ್ಮಾನಿಸಿ ಗೌರವಿಸಲಾಯಿತು. ನಗರಪಾಲಿಕೆ ಮಾಜಿ ಸದಸ್ಯೆ ಗಿರಿಜಾ ಧನಿಯಾಕುಮಾರ್, ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್, ಪರಿಸರ ಪ್ರೇಮಿ ಬೇವಿನಮರದ ಪ್ರೊ.ಸಿದ್ದಪ್ಪ, ನೇತಾಜಿ ಯುವಕರ ಸಂಘದ ಅಧ್ಯಕ್ಷ ನೇತಾಜಿ ಶ್ರೀಧರ್, ಭಗತ್ ಕ್ರಾಂತಿ ಸೇನೆಯ ಚೇತನ್, ಸಿದ್ಧಗಂಗಾ ಅಂಧರ ಮಕ್ಕಳ ಶಾಲೆಯ ಚಂದ್ರಶೇಖರಯ್ಯ, ಮುಖಂಡರಾದ ಜಯರಾಮೇಗೌಡ, ಭಾಗವಹಿಸಿದ್ದರು.

(Visited 1 times, 1 visits today)