ಚಿಕ್ಕನಾಯಕನಹಳ್ಳಿ : ಪಟ್ಟಣದ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕಿಗೆ ಆಡಳಿತ ಮಂಡಳಿಯ ಚುನಾವಣೆ ಭಾನುವಾರ ಸಂಜೆಯವರೆಗೂ ನಡೆಯಿತು. ನಂತರ ಮತ ಎಣಿಕೆ ನಡೆದು ಫಲಿತಾಂಶ ಹೊರಬಿದ್ದಿದೆ.
ಚುನಾವಣಾಧಿಕಾರಿ ಹರೀಶ್ ಕುಮಾರ್ ಘೋಷಿಸಿದ ಫಲಿತಾಂಶದ ಪ್ರಕಾರ, ಚಲಾವಣೆಯಾಗಿರುವ ಒಟ್ಟು ಮತಗಳಲ್ಲಿ 12 ಮತಗಳು ತಿರಸ್ಕೃತಗೊಂಡಿವೆ. ಮಿಕ್ಕಂತೆ, ಕಣದಲ್ಲಿದ್ದ ಒಟ್ಟು ಅಭ್ಯರ್ಥಿಗಳಲ್ಲಿ, ರಮೇಶ್ ಬಾಬು 360 ಮತಗಳು, ಸಿಎಂ ರಂಗಸ್ವಾಮಿ 308 ಮತಗಳು, ಬೀರಪ್ಪ 304 ಮತಗಳು, ಸಿ ಎಸ್ ರಮೇಶ್ 284 ಮತಗಳು, ಮಂಜುನಾಥ್ 282 ಮತಗಳು, ಮಹಮ್ಮದ್ ಕಲಂದರ್ 280 ಮತಗಳು, ಸಿಬಿ ರೇಣುಕಸ್ವಾಮಿ 278 ಮತಗಳು, ಸಿ ಎಲ್ ದೊಡ್ಡಯ್ಯ 265 ಸಿ ಎಚ್ ದೊರೆ ಮುದ್ದಯ್ಯ 248 ಮತಗಳನ್ನು ಪಡೆಯುವ ಮೂಲಕ ಕೋ-ಆಪರೇಟಿವ್ ಬ್ಯಾಂಕ್’ನ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಅಲ್ಲದೆ ಈಗಾಗಲೇ ಮೀಸಲು ಹಿಂದುಳಿದ ವರ್ಗ ಹೇಗೆ ಶಶಿಧರ್ ಹಿಂದುಳಿದ ವರ್ಗ ಬಿ ಸಿಜಿ ಮಂಜುನಾಥ್ ಪರಿಶಿಷ್ಟ ಜಾತಿ ಸಿಎಚ್ ಪ್ರಕಾಶ್ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಕ್ಕೆ ಸಿ ಎಚ್ ಲವಕುಮಾರ್ ಮಹಿಳಾ ಮೀಸಲು ಕ್ಷೇತ್ರಕ್ಕೆ ಪುಷ್ಪಲತಾ ಶಿಲ್ಪ ಸಿಎಸ್ ಇವರುಗಳು ಅವಿರೋಧ ಆಯ್ಕೆಯಾಗಿದ್ದಾರೆ.
ರಾಜಕೀಯವಾಗಿ ಹೊಸ ಚೈತನ್ಯ ಸಿಕ್ಕಿದೆ ; ರಮೇಶ್ ಬಾಬು: ಅತಿಹೆಚ್ಚು ಮತಗಳನ್ನು ಪಡೆದು ಜಯ ಗಳಿಸಿರುವ ರಮೇಶ್ ಬಾಬು ಫಲಿತಾಂಶ ಹೊರಬಿದ್ದ ನಂತರ ಮಾತನಾಡಿ, ಶತಮಾನದ ಇತಿಹಾಸವಿರುವ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್ ಕಟ್ಟುವಲ್ಲಿ ಕೆ ಆರ್ ತಿಮ್ಮದಾಸಪ್ಪನವರು, ಪಟ್ಟಾಭಿರಾಮಶೆಟ್ಟರು, ರಾಜೇಶಶೆಟ್ಟರು ಮತ್ತು ಲಿಂಗದೇವರು ಮೊದಲಾದವರ ಶ್ರಮ ಅಗಣಿತವಾದುದು. ಹಿಂದೆ ದಿ-ಕೋ ಆಪರೇಟಿವ್ ಬ್ಯಾಂಕ್ ಎಂದು ಹೆಸರಿದ್ದ ಈ ಬ್ಯಾಂಕಿಗೆ ನಾನು ಅಧ್ಯಕ್ಷನಾಗಿದ್ದ ಕಾಲದಲ್ಲಿ ‘ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್’ ಎಂದು ಮರುನಾಮಕರಣ ಮಾಡಿದ್ದೆವು. ಅದೇ ತರಹ ಈ ಬ್ಯಾಂಕಿನ ಪ್ರಗತಿ ಹಾಗೂ ಬ್ಯಾಂಕ್ ಮೂಲಕ ಬಡವ ಬಲ್ಲಿದರ ಸೇವೆಗೆ ನಾನು ಮತ್ತು ನನ್ನ ತಂಡ ಕಟಿಬದ್ಧವಾಗಿದೆ. ರಾಜ್ಯಮಟ್ಟದ ರಾಜಕಾರಣದಲ್ಲಿ ವ್ಯಸ್ತಗೊಂಡಿದ್ದ ನನಗೆ, ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಕಾರಣದತ್ತ ಹೊರಳಲು ಈ ಗೆಲುವು ನವ ಚೈತನ್ಯ ತಂದಿದೆ ಎಂದು ಹರ್ಷಿಸಿದರು. ಪ್ರಾಮುಖ್ಯತೆ:
ಕಳೆದೆರಡು ಮೂರು ಬಾರಿಯಿಂದ ಆಡಳಿತ ಮಂಡಳಿಯ ಚುನಾವಣೆ ನಡೆಯದೆ ಸದಸ್ಯ-ಪದಾಧಿಕಾರಿಗಳ ಅವಿರೋಧ ಆಯ್ಕೆ ನಡೆಯುತ್ತಿತ್ತು. 15 ವರ್ಷಗಳ ನಂತರ ಈಗ ಮತ್ತೆ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣಾ ಪ್ರಕ್ರಿಯೆಗೆ ತೆರೆದುಕೊಂಡಿದೆ. ಇದರ ಪರಿಣಾಮ, ಷೇರುದಾರ ಮತದಾರರಲ್ಲೂ ಉತ್ಸುಕತೆ ಕಾಣುತ್ತಿದೆ. ಪಟ್ಟಣದ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್ ಇತಿಹಾಸದಲ್ಲೇ ಶೇಕಡಾ 95’ರಷ್ಟು ಮತ ಚಲಾಯಿಸುವ ಮೂಲಕ ಬ್ಯಾಂಕಿನ ಷೇರುದಾರ-ಮತದಾರರು, ಪ್ರಜಾಪ್ರಭುತ್ವೀಯ ಪ್ರಕ್ರಿಯೆಯೇ ಅತ್ಯುತ್ತಮ ಎಂಬುದಕ್ಕೆ ಸಾಕ್ಷ್ಯ ಒದಗಿಸಿದ್ದಾರೆ.
(Visited 1 times, 1 visits today)