ಹುಳಿಯಾರು: ಅಧಿಕಾರಿಗಳಿಗೆ ಕರ್ತವ್ಯದ ಪ್ರಜ್ಞೆ ಮತ್ತು ಜನಪ್ರತಿನಿಧಿಗಳಿಗೆ ಇಚ್ಚಾಶಕ್ತಿ ಇಲ್ಲದಿದ್ದರೆ ಸಾರ್ವಜನಿಕರ ಹಣ ಹೇಗೆ ವ್ಯರ್ಥವಾಗುತ್ತದೆ ಎನ್ನುವುದಕ್ಕೆ ಹುಳಿಯಾರು ಪಟ್ಟಣ ಪಂಚಾಯ್ತಿಯ ಪದವಿ ಕಾಲೇಜಿನ ಪಕ್ಕದಲ್ಲಿರುವ ನೀರಿನ ಓವರ್ ಹೆಡ್ ಟ್ಯಾಂಕ್ ನಿದರ್ಶನವಾಗಿದೆ. ಈ ಟ್ಯಾಂಕ್ ಕಟ್ಟಿ ಬರೋಬ್ಬರಿ ಹದಿನೈದು ವರ್ಷಗಳು ಕಳೆದಿದ್ದರೂ ಇಲ್ಲಿಯವರೆಗೂ ಒಂದೇ ಒಂದು ಹನಿ ನೀರನ್ನು ಟ್ಯಾಂಕ್ ಕಂಡಿಲ್ಲ.
ಹೌದು, ಹುಳಿಯಾರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಲಿಂಗಪ್ಪನಪಾಳ್ಯ, ಸೋಮಜ್ಜನಪಾಳ್ಯ, ವೈ.ಎಸ್.ಪಾಳ್ಯ ಗ್ರಾಮಗಳ ನೀರಿನ ಬವಣೆ ನೀಗಿಸುವ ಸಲುವಾಗಿ 2007 ರಲ್ಲಿ ಸ್ವಜಲದಾರೆ ಯೋಜನೆಯಡಿ ಲಕ್ಷಾಂತರ ಹಣ ವ್ಯಯಿಸಿ ಪದವಿ ಕಾಲೇಜು ಪಕ್ಕದಲ್ಲಿ ಓವರ್ ಹೆಡ್ ಟ್ಯಾಂಕ್ ಕಟ್ಟಲಾಗಿತ್ತು. ಈ ಟ್ಯಾಂಕ್‌ಗೆ ಹುಳಿಯಾರು ಕೆರೆಯಲ್ಲಿನ ಕೊಳವೆಬಾವಿಯಿಂದ ನೀರು ಪೂರೈಸಿ ಈ ಮೂರು ಹಳ್ಳಿಗಳಿಗೆ ಸಮರ್ಪಕವಾಗಿ ನೀರು ಪೂರೈಸುವುದು ಉದ್ದೇಶವಾಗಿತ್ತು. ಆದರೆ ಇಲ್ಲಿಯವರೆವಿಗೆ ಈ ಟ್ಯಾಂಕ್‌ಗೆ ಒಂದೇ ಒಂದು ದಿನ ನೀರು ತುಂಬಿಸಿದ ನಿದರ್ಶನವಿಲ್ಲ.ಲಿಂಗಪ್ಪನಪಾಳ್ಯದ ನೂರಾರು ಮನೆಗಳಿಗೆ ಇರುವ ಏಕೈಕ ಕೊಳವೆಬಾವಿಯಿಂದ ನೀರು ಪೂರೈಸಲಾಗುತ್ತಿದೆ. ಈ ಕೊಳವೆಬಾವಿ ಕೆಟ್ಟು ರಿಪೇರಿ ಮಾಡಿಸಲು ತಿಂಗಳುಗಟ್ಟಲೆ ಹಿಡಿದು ಜನ ಪಂಚಾಯ್ತಿ ಮುಂದೆ ಬಂದು ನೀರಿಗಾಗಿ ಗಲಾಟೆ ಮಾಡಿದಾಗಲೂ ಸಹ ಈ ಓವರ್ ಹೆಡ್ ಟ್ಯಾಂಕ್ ಸದ್ಬಳಕೆ ಮಾಡಿಕೊಳ್ಳುವ ಆಸಕ್ತಿಯನ್ನು ಪಂಚಾಯ್ತಿ ಅಧಿಕಾರಿಗಳು, ಜನಪ್ರತಿನಿಧಿಗಳು ತೋರಲಿಲ್ಲ. ಸೋಮಜ್ಜನಪಾಳ್ಯ, ವೈ.ಎಸ್.ಪಾಳ್ಯ ಗ್ರಾಮಗಳಲ್ಲಿ ಬೇಸಿಗೆ ಸಂದರ್ಭದಲ್ಲಿ ನೀರಿನ ಹಾಹಾಕಾರ ಎದುರಾದಗಲೂ ಟ್ಯಾಂಕ್ ಬಳಸಲು ಮುಂದಾಗಲಿಲ್ಲ. ಪರಿಣಾಮ ಲಕ್ಷಾಂತರ ಹಣ ವ್ಯಯಿಸಿ ನಿರ್ಮಿಸಿದ ಟ್ಯಾಂಕ್ ಇಂದು ನಿರುಪಯುಕ್ತವಾಗಿ ವ್ಯರ್ಥವಾಗಿ ನಿಂತಿದೆ.
ಪ್ರಸ್ತುತ ವೈ.ಎಸ್.ಪಾಳ್ಯದಲ್ಲಿ ವಿವಿಧ ಯೋಜನೆಯಲ್ಲಿ ಪ್ರತ್ಯೇಕ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ಸಮರ್ಪಕವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಲಿಂಗಪ್ಪನಪಾಳ್ಯ, ಸೋಮಜ್ಜನಪಾಳ್ಯ, ಕಾಮಶೆಟ್ಟಿಪಾಳ್ಯ ಗ್ರಾಮಗಳಿಗೆ ನೀರಿನ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಇರುವ ಕೊಳವೆಬಾವಿ ಕೈ ಕೊಟ್ಟರೆ ರಿಪೇರಿಯಾಗುವವರೆವಿಗೂ ನೀರಿನ ಪರದಾಟ ತಪ್ಪಿದಲ್ಲ. ಇನ್ನು ಈಗ ಪೂರೈಸುತ್ತಿರುವ ನೀರು ಸಪ್ಪೆಯಾಗಿದ್ದು ಬಳಕೆಗಷ್ಟೆ ಜನರು ಬಳಸುತ್ತಿದ್ದಾರೆ. ಶುದ್ದ ಕುಡಿಯುವ ನೀರಿಗೆ ಈಗಲೂ ಅಲೆಯುತ್ತಿದ್ದಾರೆ.
(Visited 1 times, 1 visits today)