ಹುಳಿಯಾರು: ಕೇಂದ್ರ ಸರ್ಕಾರದ ರಾಜ್ಯ ಸಚಿವ ವಿ.ಸೋಮಣ್ಣ ಅವರು ಹುಳಿಯಾರು ಹೋಬಳಿ ಮಟ್ಟದ ಸಾರ್ವಜನಿಕ ಕುಂದು ಕೊರತೆ ಸಭೆಯನ್ನು ಗುರುವಾರ ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ನಡೆಸಿದರು. ಈ ಸಭೆಯಲ್ಲಿ ಹುಳಿಯಾರಿನ ಯುವಕರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮಾಡುವಂತೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ತಹಸೀಲ್ದಾರ್ ಕೆ.ಪುರಂದರ ಅವರಿಗೆ ಶೀಘ್ರ ಕನಿಷ್ಟ 1 ಎಕರೆ ಭೂಮಿ ಗುರುತಿಸಿ ಹಣ ಬಿಡುಗಡೆ ಮಾಡಿಸುತ್ತೇನೆ ಎಂದರು.
ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆಯಲ್ಲಿ ಟ್ರೆöÊನಿಂಗ್ ಪಡೆದಿದ್ದರೂ ಸಹ ಬ್ಯಾಂಕ್‌ಗಳು ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ಫಲಾನುಭವಿಗಳು ದೂರಿದರು. ಇದಕ್ಕೆ ಸಚಿವರು ಈಗಾಗಲೇ ಜಿಲ್ಲಾಧಿಕಾರಿಗಳ ಸಭೆ ಮಾಡಿದ್ದು ತರಬೇತಿ ಪಡೆದ ಎಲ್ಲರಿಗೂ ಲೋನ್ ಕೊಡಿಸಲು ತಿಳಿಸಿದ್ದೇನೆ. ಇನ್ನೊಂದು ವಾರದಲ್ಲಿ ಸಮಸ್ಯೆ ಪರಿಹಾರವಾಗಲಿದೆ ಎಂದರು.
ರೈಲ್ವೆ ಇಲಾಖೆಯಲ್ಲಿ ಉದ್ಯೋಗಕ್ಕಾಗಿ ಅರ್ಜಿ ಹಾಕಿದ್ದೇನೆ. ಕೆಲಸ ಕೊಡಿಸಿ ಸಾರ್ ಎಂದು ಅನೇಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಸಚಿವರಲ್ಲಿ ಮನವಿ ಮಾಡಿದರು. ರೈಲ್ವೆ ಇಲಾಖೆಯಲ್ಲಿ ಈಗ ಮೊದಲಿನಂತೆ ನೇರ ನೇಮಕಾತಿ ಇಲ್ಲ. ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು. ಕನ್ನಡದಲ್ಲೇ ಈಗ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದೇನೆ. ನಿಮ್ಮ ಮಕ್ಕಳನ್ನು ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಹೇಳಿ ಎಂದು ಸಚಿವರು ತಿಳಿಸಿದರು.
ಶಾಸಕ ಸಿ.ಬಿ.ಸುರೇಶ್ ಬಾಬು, ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಕೆ.ಪುರಂದರ, ತಾಪಂ ಇಒ ದೊಡ್ಡಸಿದ್ಧಯ್ಯ, ಪಪಂ ಅದ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಕಾವ್ಯರಾಣಿ, ಸಹಾಯಕ ಕೃಷಿ ಅಧಿಕಾರಿ ಶಿವರಾಜ್ ಕುಮಾರ್, ಸಿಡಿಪಿಒ ಹೊನ್ನಪ್ಪ, ತೋಟಗಾರಿಗೆ ಸಹಾಯಕ ನಿರ್ದೆಶಕ ರಾಜಪ್ಪ, ಪಶು ಇಲಾಖೆಯ ಸಹಾಕಯ ನಿರ್ದೇಶಕ ರೆ.ಮಾ.ನಾಗಭೂಷಣ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ತಾಪಂ ಮಾಜಿ ಅಧ್ಯಕ್ಷೆ ಚೇತನಾಗಂಗಾಧರ್ ಅವರು ಟಿ.ತಾಂಡ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲು ಮನವಿ ಸಲ್ಲಿಸಿದರು.

(Visited 1 times, 1 visits today)