ತುಮಕೂರು: ಯುವಜನರು, ಅದರಲ್ಲಿಯೂ ಹೆಣ್ಣು ಮಕ್ಕಳು ಓದುವ ಸಮಯದಲ್ಲಿ ಇನ್ನಿಲ್ಲದ ಆಕರ್ಷಣೆಗೆ ಒಳಗಾಗಿ, ದಾರಿ ತಪ್ಪಿದರೆ, ಬದುಕಿನದ್ದಕ್ಕೂ ಸಂಕಷ್ಟದ ಜೀವನ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಶ್ರೀಮತಿ ನೂರುನ್ನಿಸಾ ಎಚ್ಚರಿಸಿದ್ದಾರೆ.
ನಗರದ ಮಳೆಕೋಟೆಯ ಧಾನಿಶ್ ಸಭಾಂಗಣದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ,ತೆಹ್ರಿರಿಕ್‌ಎ ಉರ್ದು ಆದಬ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮೌಲಾನ ಅಬ್ದುಲ್ ಕಲಾಂ ಆಜಾದ್ ಶಾಲೆಯ ಮಕ್ಕಳಿಗೆ ಹಮ್ಮಿಕೊಂಡಿದ್ದ ಪರೀಕ್ಷಾ ಪೂರ್ವ ಮಾರ್ಗದರ್ಶನ ಕಾರ್ಯಾಗಾರ ಹಾಗೂ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಮೊಬೈಲ್, ಇನ್ನಿತರ ಅಕರ್ಷಣೆಗಳಿಂದ ದೂರವಿದ್ದು,ವಿದ್ಯಾರ್ಥಿ ಜೀವನವನ್ನು ಸದುಪಯೋಗ ಪಡಿಸಿಕೊಂಡರೆ,ಸಾಧಕರ ಪಟ್ಟಿಯಲ್ಲಿ ನಿಲ್ಲಬಹುದು.ಇದಕ್ಕೆ ನನ್ನ ಜೀವನವೇ ಉದಾಹರಣೆ ಎಂದರು.
ನಮ್ಮ ತಂದೆ, ತಾಯಿ, ನಮಗೆ ಬೇಕಾದನ್ನು ಕೊಡಿಸಲಿಲ್ಲ,ಒಳ್ಳೆಯ ಶಾಲೆಗೆ ಸೇರಿಸಲಿಲ್ಲ ಎಂದು ದೂರುವ ಬದಲು ಇರುವುದರಲ್ಲಿಯೇ ಕಷ್ಟಪಟ್ಟು ಓದಿ,ಒಳ್ಳೆಯ ಅಂಕ ಪಡೆದು,ಇರುವ ಅವಕಾಶಗಳನ್ನು ಬಳಸಿಕೊಂಡರೆ ನೀವು ಕೂಡ ನಮ್ಮಂತೆ ನ್ಯಾಯಾಧೀಶರೋ,ವಕೀಲರೋ,ಅಧಿಕಾರಿಗಳೋ ಆಗಬಹುದು.ಮನೆಯಲ್ಲಿ ಅಪ್ಪ, ಅಮ್ಮ ನಮಗೆ ಸಮಯ ನೀಡುತ್ತಿಲ್ಲ ಎಂದು ಸೊಷಿಯಲ್ ಮೀಡಿಯಾದಲ್ಲಿ ಗೆಳೆಯರನ್ನು ಹುಡುಕುವ ಬದಲು ಅದೇ ಸಮಯವನ್ನು ಓದಿಗೆ ನೀಡಿದರೆ ಸಕಲವೂ ನಿಮ್ಮ ಬಳಿ ಬರುತ್ತದೆ.ಅರ್ಥಿಕ ಸ್ವಾವಲಂಭಿಗಳಾದರೆ,ನಿಮ್ಮ ಪೋಷಕರು ಈಡೇರಿಸಲಾಗದ ಬೇಡಿಕೆ ಗಳನ್ನು ನೀವೇ ಸ್ವತಃ ಈಡೇರಿಸಿಕೊಳ್ಳುವ ಅವಕಾಶ ದೊರೆಯುತ್ತದೆ.ಅದೇ ರೀತಿ ಪೋಷಕರು ಸಹ ನಿಮ್ಮ ಮಕ್ಕಳನ್ನು ಇನ್ನೊಂದು ಮಗುವಿನೊಂದಿಗೆ ತಾಳೆ ಹಾಕಿ ನೋಡುವ ಬದಲು,ಆತ ಒಳ್ಳೆಯ ಮಾನವೀಯತೆ ಉಳ್ಳ ಮನುಷ್ಯನಂತಾಗಲು ಪ್ರೇರೆಪಿಸಬೇಕೆಂದು ನ್ಯಾ.ನೂರುನ್ನಿಸಾ ಸಲಹೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಬ್ಬೀರ ಅಹ್ಮದ್ ಸರ್ಜಾಪುರ ಮಾತನಾಡಿ, ಇಲಾಖೆಯಿಂದ ಎಸ್.ಎಸ್.ಎಲ್.ಸಿ. ಫಲಿತಾಂಶ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.ಅದಲ್ಲದೆ ಮೌಲಾನ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆ ನೀಗಿಸಲು ಶಿಕ್ಷಕರ ಹುದ್ದೆ ಭರ್ತಿಗೆ ಪ್ರಕ್ರಿಯೆ ಆರಂಭವಾಗಿವೆ.ತುರ್ತು ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಿಂದ ಕಾರ್ಯಭಾರ ನಿರ್ವಹಿಸಲಾಗುತ್ತಿದೆ.ಅಬ್ದುಲ್ ಕಲಾಂ ಅವರ ಆಶಯದೊಂದಿಗೆ ಉದಾತ್ತ ಗುರಿಯೊಂದಿಗೆ ಮುನ್ನೆಡೆಯಿರಿ, ನಿಮೊಂದಿಗೆ ಇಲಾಖೆ ಕೈಜೋಡಿಸಲಿದೆ ಎಂದರು. ವೇದಿಕೆಯಲ್ಲಿ ಕೆಎಂಡಿಸಿಯ ಜಿಲ್ಲಾ ವ್ಯವಸ್ಥಾಪಕ ಅಲೀಮ್ ಉಲ್ಲಾ, ಮೌಲಾನ ಅಜಾದ್ ಶಾಲೆಯ ಪ್ರಾಂಶುಪಾಲರಾದ ಹರೀಶ್, ಎಸ್.ಎಂ, ಇಆರ್‌ಓ ಅಫ್ಜಲ್‌ಖಾನ್ ಮತ್ತಿತರರು ಉಪಸ್ಥಿತರಿದ್ದರು. 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಅಭಿನಂದಿಸಲಾಯಿತು.

(Visited 1 times, 1 visits today)