ತುಮಕೂರು: ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಿನದ 24 ಗಂಟೆಯೂ ಕಾರ್ಯೋನ್ಮುಖರಾಗಿರುವ ಪೊಲೀಸರ ಒತ್ತಡ ನಿವಾರಣೆಗೆ ಕ್ರೀಡೆ ಅತ್ಯವಶ್ಯ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ತಿಳಿಸಿದರು.
ನಗರದ ಡಿಎಆರ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಲಾಗಿರುವ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಬಲೂನ್ ಮತ್ತು ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ದೇಶ, ರಾಜ್ಯದಲ್ಲಿನ ನಾಗರಿಕರನ್ನು ರಕ್ಷಣೆ ಮಾಡುವಂತೆ ಪೊಲೀಸರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಉತ್ತಮ ಆರೋಗ್ಯ, ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಇಂತಹ ಕ್ರೀಡಾಕೂಟ ಆಯೋಜಿಸುವುದು ಬಹುಮುಖ್ಯ ಎಂದರು.
ಪೊಲೀಸರು ವರ್ಷಕ್ಕೊಮ್ಮೆ ಮೂರು ದಿನ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಮುಖ್ಯವಲ್ಲ. ತಮ್ಮ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ನಿರಂತರವಾಗಿ ಕಾಪಾಡಿಕೊಳ್ಳಲು ಸಮಯ ಸಿಕ್ಕಾಗ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅವಶ್ಯ ಎಂದು ಸಲಹೆ ನೀಡಿದರು.
ಸಾರ್ವಜನಿಕರಿಗೆ ಸರ್ಕಾರ ಎಂದಾಕ್ಷಣ ನೆನಪಾಗುವುದು ಪೊಲೀಸ್ ಇಲಾಖೆ. ಪೊಲೀಸರ ಬಗ್ಗೆ ಜನರು ನಂಬಿಕೆ ಇಟ್ಟಿದ್ದಾರೆ. ನಿಮ್ಮ ಕೈಯಲ್ಲಿ ಮಾತ್ರ ತಕ್ಷಣ ನ್ಯಾಯ ಒದಗಿಸಲು ಸಾಧ್ಯ. ಇದನ್ನು ಅರ್ಥೆÊಸಿಕೊಂಡು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿಯೊಬ್ಬ ನಾಗರಿಕರು ಸಮಸ್ಯೆ ಹೊತ್ತು ಠಾಣೆಗಳಿಗೆ ಬಂದಾಗ ಕಾಳಜಿ, ಆಸಕ್ತಿಯಿಂದ ಸ್ಪಂದಿಸುವ ಮೂಲಕ ಕಾರ್ಯನಿರ್ವಹಿಸಬೇಕು. ಆಗ ಮಾತ್ರ ಸರ್ಕಾರದ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸಮಾಜದಲ್ಲಿ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಪೊಲೀಸರು ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ನಮ್ಮ ಜಿಲ್ಲೆಯ ಪೊಲೀಸರು ಒಂದು ಹೆಜ್ಜೆ ಮುಂದೆ ಇದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ನಾವು ಪೊಲೀಸರನ್ನು ಭೇಟಿಯಾಗುವ ಸಂದರ್ಭ ಒದಗಿ ಬಂದಾಗ ಕಾನೂನು ಸುವ್ಯವಸ್ಥೆ ವಿಚಾರ, ಒತ್ತಡ ಇರುತ್ತದೆ. ಇಂದು ಎಲ್ಲರನ್ನು ಶಾಂತಿಯುತವಾಗಿರುವುದನ್ನು ನೋಡುತ್ತಿರುವುದು ಖುಷಿ ತಂದಿದೆ ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅವರು, ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿ, ಗಣ್ಯರನ್ನು ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಉಪವಿಭಾಗದ ಪೊಲೀಸ್ ಕ್ರೀಡಾಪಟುಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ಈ ಸಂದರ್ಭದರ್ಲಿ ಅಡಿಷನಲ್ ಎಸ್ಪಿಗಳಾದ ವಿ. ಮರಿಯಪ್ಪ, ಅಬ್ದುಲ್ ಖಾದರ್, ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಮಲ್ಲಿಕಾರ್ಜುನ್, 12ನೇ ಬೆಟಾಲಿಯನ್ ಕಮಾಂಡೆAಟ್ ಹಂಜಾ ಹುಸೇನ್ ಸೇರಿದಂತೆ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

(Visited 1 times, 1 visits today)