ತುಮಕೂರು: ಬೀದಿಬದಿ ವ್ಯಾಪಾರಿಗಳು ಸಂಘಟಿತರಾಗಬೇಕು, ಸಂಘಟನೆಯಾಗಿ ಶಕ್ತಿ ಬೆಳೆಸಿಕೊಂಡು ಸರ್ಕಾರದ ಸೌಲಭ್ಯ ಪಡೆಯುವುದು, ಪರಸ್ಪರ ಸಹಕಾರದಿಂದ ಬೆಳವಣಿಗೆ ಆಗಬೇಕು ಎಂದು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶ್ರಮ ಜೀವಿ ಬೀದಿಬದಿ ವ್ಯಾಪಾರಿಗಳ ರಾಜ್ಯ ಸಂಘದಿAದ ಸೋಮವಾರ ನಗರದ ಕೆ.ಆರ್.ಬಡಾವಣೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ, ಬೀದಿಬದಿ ವ್ಯಾಪಾರಿಗಳು ಸಣ್ಣ ಪ್ರಮಾಣದಲ್ಲಿ ವ್ಯಾಪಾರ ಆವಲಂಬಿಸಿ ಬದುಕು ಸಾಗಿಸುತ್ತಿದ್ದಾರೆ., ಇಂತಹ ವ್ಯವಹಾರಸ್ಥರಿಗೆ ಸರ್ಕಾರದ ವಿವಿಧ ಯೋಜನೆಗಳು, ಸವಲತ್ತುಗಳ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡಿ ಅವರಿಗೆ ಅವುಗಳ ಪ್ರಯೋಜನ ದೊರೆಯುವಂತೆ ಮಾಡಬೇಕು ಎಂದು ಹೇಳಿದರು.
ಬಡವರ ಮನೆ ಚಿಕ್ಕದಾದರೂ ಮನಸು ದೊಡ್ಡದು, ಶ್ರೀಮಂತರ ಮನೆ ದೊಡ್ಡದಾಗಿದ್ದರೂ ಅವರ ಮನಸು ಚಿಕ್ಕದು. ಕನ್ನಡದ ಬಗ್ಗೆ ಪ್ರೀತಿ ಅಭಿಮಾನ, ರಾಜ್ಯೋತ್ಸವ ಆಚರಣೆ ಮಾಡುವುದು ಇಂತಹ ಬಡವರ್ಗದ ಜನರೇ ಹೆಚ್ಚು. ಶ್ರೀಮಂತರು ರಾಜ್ಯೋತ್ಸದಂತಹ ಆಚರಣೆಗೆ ಹೆಚ್ಚು ಆಸಕ್ತಿ ತೋರುವುದಿಲ್ಲ. ಕನ್ನಡ ಪ್ರೇಮ ಇಂತಹವರಲ್ಲಿ ಮನೆಮಾಡಿದೆ ಎಂದರು.
ಬಿಜೆಪಿ ಮುಖಂಡ ಸ್ಫೂರ್ತಿ ಚಿದಾನಂದ್ ಮಾತನಾಡಿ, ಶ್ರಮಜೀವಿ ಬೀದಿಬದಿ ವ್ಯಾಪಾರಿಗಳು ಸಂಘಟಿತರಾಗಿ ಒಂದು ಸಹಕಾರ ಸಂಘ ಆರಂಭಿಸಿ, ಪರಸ್ಪರ ಆರ್ಥಿಕ ನೆರವು ಪಡೆದುಕೊಂಡು ಅಭಿವೃದ್ಧಿಯಾಗುವ ಬಗ್ಗೆ ಚಿಂತನೆ ಮಾಡಬೇಕು. ದೊಡ್ಡ ಬ್ಯಾಂಕುಗಳಲ್ಲಿ ಸಣ್ಣ ವ್ಯಾಪಾರಿಗಳು ಸಾಲ ಪಡೆಯುವುದು ಸುಲಭವಲ್ಲ, ಈ ಪರಿಸ್ಥಿತಿಯಲ್ಲಿ ನಿಮ್ಮದೇ ಒಂದು ಹಣಕಾಸು ಸಂಸ್ಥೆ ಇದ್ದರೆ ಸುಲಭವಾಗಿ ಸಾಲ ಪಡೆದು ತಮ್ಮ ವ್ಯಾಪಾರಕ್ಕೆ ಬಳಸಿಕೊಳ್ಳಬಹುದು ಎಂದರು.
ಕೇAದ್ರ ಸರ್ಕಾರದಿಂದ ಬೀದಿಬದಿ ವ್ಯಾಪಾರಿಗಳಿಗೆ ಆರಂಭಿಕವಾಗಿ ಹತ್ತು ಸಾವಿರ ರೂ. ಸಾಲ ನೀಡುವ ಯೋಜನೆಯಿದೆ, ಯೋಜನೆಯ ಸಾಲ ತೀರಿಸಿ ಒಂದು ಲಕ್ಷ ರೂ. ವರೆಗೂ ಸಾಲ ಪಡೆಯಲು ಅವಕಾಶವಿದೆ. ಯಾವುದೇ ಸಾಲ ಪಡೆದಾಗ ಅದನ್ನು ವ್ಯವಹಾರಕ್ಕೆ ಬಳಸಿಕೊಂಡು ಅದರಿಂದ ಅನುಕೂಲ ಪಡೆದು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ವ್ಯಾಪಾರ ವ್ಯವಹಾರದಲ್ಲಿ ಶಿಸ್ತು ಬೆಳೆಸಿಕೊಂಡರೆ ಬೆಳವಣಿಗೆ ಕಾಣಬಹುದು ಎಂದು ಹೇಳಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದರು.ಮುಖಂಡರಾದ ಟಿ.ಆರ್.ಸದಾಶಿವಯ್ಯ, ಕನ್ನಡ ಪ್ರಕಾಶ್, ರಾಜ್ಯ ಸಂಘದ ಗೌರವಾಧ್ಯಕ್ಷ ಎಂ.ಬಿ.ಶಿವಣ್ಣ, ಪ್ರಧಾನ ಕಾರ್ಯದರ್ಶಿ ಹೆಚ್.ರಾಜಣ್ಣ, ಸಂಘಟನಾ ಕಾರ್ಯದರ್ಶಿ ಸಿದ್ಧಲಿಂಗೇಶ್ವರ, ಭಾಗವಹಿಸಿದ್ದರು.
(Visited 1 times, 1 visits today)