ತುಮಕೂರು: ಕಳೆದ ವರ್ಷ ಜಿಲ್ಲೆಯಲ್ಲಿ 20 ಕೋಟಿಯಷ್ಟು ಹಣವನ್ನು ಸೈಬರ್ ಅಪರಾಧಿಗಳು ಕಬಳಿಸಿದ್ದಾರೆ. ಸೈಬರ್ ಅಪರಾಧಗಳ ತೀವ್ರತೆ ಹೆಚ್ಚಾಗಿರುವುದರಿಂದ ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಭಿಯಾನವಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ವಿ. ಅಶೋಕ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮತ್ತು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ಪ್ರಜಾಪ್ರಗತಿ ದಿನಪತ್ರಿಕೆ-ಪ್ರಗತಿ ಟಿವಿ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸೈಬರ್ ಅಪರಾಧ ಜಾಗೃತಿ ಅಭಿಯಾನ’ದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ನಮ್ಮ ಜಿಲ್ಲೆಯೊಂದರಲ್ಲೇ 2022ರಲ್ಲಿ 2.5 ಕೋಟಿ, 2023ರಲ್ಲಿ ಸುಮಾರು 4 ಕೋಟಿ ಹಣ ಸೈಬರ್ ವಂಚಕರ ಪಾಲಾಗಿದೆ. ರಾಜ್ಯದಲ್ಲಿ 2000 ಕೋಟಿ ಹಣವನ್ನು ಸೈಬರ್ ಕಳ್ಳರು ದೋಚಿದ್ದಾರೆ. ಇದರಲ್ಲಿ 1000 ಕೋಟಿ ಬೆಂಗಳೂರಿಗರು ಕಳೆದುಕೊಂಡಿದ್ದಾರೆ. ಇದರಿಂದ ಸೈಬರ್ ಅಪರಾಧಿಗಳ ಬಲಿಪಶುಗಳು ಮಾನಸಿಕ ಆಘಾತಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಹಿರಿಯ ನಾಗರಿಕರೇ ಸೈಬರ್ ಅಪರಾಧಿಗಳ ಮೊದಲ ಗುರಿ. ಶೇ.90 ರಷ್ಟು ವಿದ್ಯಾವಂತರೇ ಸೈಬರ್ ಅಪರಾಧಕ್ಕೆ ಬಲಿಯಾಗುತ್ತಿದ್ದಾರೆ. ಲೋನ್ ಅಪ್ಲಿಕೇಶನ್‌ಗಳ ಸುಳಿಯಲ್ಲಿ ವಿದ್ಯಾರ್ಥಿಗಳು ಸಿಲುಕಿ, ಅದರಿಂದ ಹೊರಬರದೆ ನರಳುತ್ತಿದಾರೆ. ಯಾವುದೇ ರೀತಿಯ ಸೈಬರ್ ವಂಚನೆಗೆ ಗುರಿಯಾದರೆ ತಕ್ಷಣವೇ ಸೈಬರ್ ಕೋಶ 1930 ಕರೆ ಮಾಡಿ ದೂರು
ದಾಖಲಿಸಬೇಕು
ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಬೇಕು ಎಂದು ಅರಿವು ಮೂಡಿಸಿದರು.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶರಾದ ನೂರುನ್ನೀಸಾ ಮಾತನಾಡಿ, ವೈಯಕ್ತಿಕ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಭೇಟಿಯಾದ ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು. ಅಶ್ಲೀಲ ಚಿತ್ರಗಳನ್ನು ಕಳಿಸಬಾರದು. ಅಪರಿಚಿತ ವಿಡಿಯೋ ಹಾಗೂ ಸ್ಪಾö್ಯಮ್ ಕರೆಗಳನ್ನು ಸ್ವೀಕರಿಸಬಾರದು. ಶೇ.90 ರಷ್ಟು ವಿಚ್ಛೇದನಗಳು ಮೊಬೈಲ್ ಕಾರಣದಿಂದಾಗಿ ಆಗುತ್ತಿವೆ ಎಂದರು. ತಿಪಟೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಹಾಗೂ ಸೈಬರ್-ಆರ್ಥಿಕ ಅಪರಾಧ, ಮಾದಕ ವಸ್ತುಗಳ ಠಾಣೆಯ ಅಧಿಕಾರಿ ವಿನಾಯಕ ಶೆಟಗೇರಿ ಮಾತನಾಡಿ, ಸೈಬರ್ ವಂಚಕರು ಸಂಭಾವ್ಯರ ಪಟ್ಟಿಮಾಡಿ, ಆಮಿಷ ಒಡ್ಡಿ, ಕಿರುಕುಳ ನೀಡಿ, ಸಾಧ್ಯವಾದಷ್ಟು ಹಣ ದೋಚುತ್ತಿದ್ದಾರೆ. ಡಿಜಿಟಲ್ ಬಂಧನ, ಸೈಬರ್ ಅಪಹರಣ, ಲೋನ್ ಅಪ್ಲಿಕೇಶನ್, ಆಮಿಷ, ಕಿರುಕುಳ. ಇದರ ವಿರುದ್ಧ ಸರ್ಕಾರದ ಉಪಕ್ರಮ’- ವಿವಿಧ ರೀತಿಯ ಸೈಬರ್ ವಂಚನೆಗಳ ಕುರಿತು ಅರಿವು ಮೂಡಿಸಿದರು. ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮತ್ತು ವಿವಿ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಸಿಬಂತಿ ಪದ್ಮನಾಭ ಕೆ. ವಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಜಾಪ್ರಗತಿ ದಿನಪತ್ರಿಕೆಯ ಸಂಪಾದಕ ಎಸ್. ನಾಗಣ್ಣ, ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ ಉಪಸ್ಥಿತರಿದ್ದರು.
(Visited 1 times, 1 visits today)