ತುಮಕೂರು: ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆಯಿಂದ ಸೋಮವಾರ ನಗರದ ಸರ್ಕಾರಿ ಪಾಲಿಟೆಕ್ನಿಕ್ ಎದುರು ವೈಭವದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಇದರ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜಿಲ್ಲಾ ಕನ್ನಡ ಸೇನೆ ಅಧ್ಯಕ್ಷ ಧನಿಯಾಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ಕನ್ನಡ ನಾಡು, ನುಡಿ, ನೆಲ, ಜಲ ರಕ್ಷಣೆಗೆ ಕನ್ನಡಪರ ಸಂಘಟನೆಗಳು ಸಕ್ರಿಯ ಹೋರಾಟ ನಡೆಸಿದ ಪರಿಣಾಮ ಇಂದು ನಾಡಿನಲ್ಲಿ ಕನ್ನಡಿಗರಿಗೆ ದೊಡ್ಡ ಶಕ್ತಿ ಬಂದಿದೆ. ಪರಭಾಷಿಕರ ಹಾವಳಿಯಲ್ಲಿ ಕನ್ನಡದ ಅಸ್ತಿತ್ವ ಕಾಪಾಡಿಕೊಳ್ಳುವಂತಾಗಿದೆ ಎಂದರು. ಕನ್ನಡ ಸಂಘಟನೆಗಳು ಕನ್ನಡ ರಾಜ್ಯೋತ್ಸವ ಆಚರಣೆ ಜೊತೆಗೆ ನಾಡಿನ ಎಲ್ಲರಲ್ಲೂ ಭಾಷಾಭಿಮಾನ ಬೆಳೆಸಬೇಕು. ಪೋಷಕರು ಮಕ್ಕಳಲ್ಲಿ ಕನ್ನಡ ಅಭಿಮಾನ ಮೂಡಿಸಬೇಕು, ಕನ್ನಡ ನಾಡಿಗೆ ಕೊಡುಗೆ ನೀಡಿದ ಮಹನೀಯರ ಸಾಧನೆಯನ್ನು ಪರಿಚಯಿಸಬೇಕು. ಕನ್ನಡ ನಾಡಿನಲ್ಲಿ ಕನ್ನಡದ ವೈಭವ ಮೆರೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಹೊಸಕೋಟೆ ನಟರಾಜ್, ಜಿಲ್ಲಾಧ್ಯಕ್ಷ ಧೃವಕುಮಾರ್, ಮಹಿಳಾ ಘಟಕ ಅಧ್ಯಕ್ಷೆ ಸುಧಾ, ಲಲಿತಾ ಹನುಮಂತಪ್ಪ, ವಿವಿಧ ಸಂಘಟನೆಗಳ ಮುಖಂಡರಾದ ಕನ್ನಡ ಪ್ರಕಾಶ್, ನಿಸರ್ಗ ರಮೇಶ್ ಮೊದಲಾದವರು ಭಾಗವಹಿಸಿದ್ದರು.

(Visited 1 times, 1 visits today)