ತುಮಕೂರು: ಯುವಕರು ತರಗತಿಗಳಲ್ಲಿ, ಹಾಗೂ ಬಿಡುವಿನ ವೇಳೆಯಲ್ಲೆಲ್ಲ ಮೊಬೈಲಗಳನ್ನು ಬಳಸುತ್ತಾರೆ. ಹೆಚ್ಚು ಮೊಬೈಲ್ ಬಳಕೆ ಮಾಡುವುದರಿಂದ ಕುರುಡು ಮತ್ತು ಕಿವುಡುತನ ಚಿಕ್ಕ ವಯಸ್ಸಿನಲ್ಲಿಯೇ ಕಾಡುತ್ತದೆ ಎಂದು ಡಫ್ ಚಿಲ್ಡçನ್ ಫೌಂಡೇಶನ್‌ನ ಕಾರ್ಯಕ್ರಮ ವ್ಯವಸ್ಥಾಪಕ ವೀರೇಶ್ ವೈ. ಎಸ್. ಹೇಳಿದರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಮತ್ತು ರೆಡ್ ರಿಬ್ಬನ್ ಕ್ಲಬ್ ಆಯೋಜಿಸಿದ್ದ ಉಚಿತ ಕಣ್ಣು ಮತ್ತು ಕಿವಿ ತಪಾಸಣಾ ಶಿಬಿರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಎಪ್ಪತ್ತು, ಎಂಬತ್ತು ವಯಸ್ಸಿನವರಿಗೆ ಕಾಡುತ್ತಿದ್ದ ಕಿವುಡುತನ ಮತ್ತು ಅಂಧತ್ವ ಇಂದು 10-15ನೇ ವಯಸ್ಸಿನ ಮಕ್ಕಳಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ಹೆಚ್ಚಿನ ಶಬ್ದಮಾಲಿನ್ಯ ಮತ್ತು ಧ್ವನಿ ಉಪಕರಣಗಳ ಅತಿಯಾದ ಬಳಕೆ. ನವಜಾತ ಶಿಶುಗಳಲ್ಲೂ ಈ ಸಮಸ್ಯೆ ಹೆಚ್ಚುತ್ತಿದೆ ಎಂದರು.
ಮಕ್ಕಳಿಗೆ ಐದು ವರ್ಷದ ಒಳಗೆ ಕಿವಿ ಕೇಳದಿದ್ದರೆ ಅವರು ಮಾತನಾಡುವುದನ್ನು ಕಲಿಯುವುದಿಲ್ಲ. ಹಾಗಾಗಿ ಮಕ್ಕಳ ಶ್ರವಣ ನ್ಯೂನತೆಯನ್ನು ಸೂಕ್ತ ಸಂದರ್ಭದಲ್ಲಿ ವೈದ್ಯರಿಗೆ ತೋರಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ ಪಂಚೇAದ್ರಿಯಗಳಲ್ಲಿ ಕಣ್ಣು ಮತ್ತು ಕಿವಿ ಅತ್ಯಂತ ಪ್ರಮುಖವಾದವು. ಇವುಗಳನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ 230ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಣ್ಣು ಮತ್ತು ಕಿವಿ ತಪಾಸಣೆ ಮಾಡಿಸಿಕೊಂಡರು. ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶಿವಣ್ಣ, ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ಮತ್ತು ರೆಡ್ ರಿಬ್ಬನ್‌ನ ಕಾರ್ಯಕ್ರಮ ಸಂಯೋಜಕಿ ಡಾ. ಪಲ್ಲವಿ ಎಸ್. ಕುಸುಗಲ್ಲ, ವಾಸನ್ ಐ ಕೇರ್ ನ ನಾಗರಾಜ್, ಮಂಜುಳಾದೇವಿ, ರಾಮು, ಡೈಸನ್ ಉಪಸ್ಥಿತರಿದ್ದರು.

(Visited 1 times, 1 visits today)