ಮಧುಗಿರಿ: ಜಿಲ್ಲೆಯ ಪ್ರತಿಷ್ಠಿತ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ(ತುಮುಲ್) ಅಧ್ಯಕ್ಷಗಾದಿಗೆ ಜ.22ರಂದು ಚುನಾವಣೆ ನಡೆಯಲಿದ್ದು, ಸ್ಪಷ್ಟ ಬಹುಮತ ಹೊಂದಿರುವ ಕಾಂಗ್ರೆಸ್‌ಗೆ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. ಆದರೂ ಇದೇ ಕಾರಣಕ್ಕೆ ಪ್ರಭಾವಿ ಶಾಸಕರ ನಡುವೆಯೇ ಮುಸುಕಿನ ಗುಡ್ಡಾಟ ನಡೆಯುತ್ತಿದೆ. ಸಹಕಾರ ಸಂಘಗಳ ಚುನಾವಣೆ ಪ್ರಕ್ರಿಯೆಯಲ್ಲಿ ನಿರ್ದೇಶಕ ಸ್ಥಾನ ಅಯ್ಕೆಯಾದ 15 ದಿನದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯಬೇಕಿದ್ದು, ಜ.24ರೊಳಗೆ ತುಮುಲ್‌ಗೆ ಹೊಸ ಸಾರಥಿ ಆಯ್ಕೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಿಸಲಾಗಿದೆ. ಉಪವಿಭಾಗಾಧಿಕಾರಿ ತುಮಕೂರು ಗೌರವ್ ಕುಮಾರ್ ಚುನಾವಣಾಧಿಕಾರಿಯಾಗಿದ್ದಾರೆ. 1324 ಹಾಲು ಉತ್ಪಾದಕರ ಸಂಘಗಳನ್ನು ಹೊಂದಿರುವ ‘ತುಮುಲ್’ನಲ್ಲಿ ಈ ಹಿಂದಿನ ಅವಧಿಯಲ್ಲಿ ಕಾಂಗ್ರೆಸ್
1. ತುಮುಲ್ ಹಿಡಿತ ಕಾಂಗ್ರೆಸ್ ಪಕ್ಷ ಕಸರತ್ತು; -ಜೆಡಿಎಸ್ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ಈ ಬಾರಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಜಿಲ್ಲೆಯವರೇ ಆಗಿರುವುದ ರಿಂದ ‘ತುಮುಲ್’ ಚುನಾವಣೆ ಸಾಕಷ್ಟು ಕುತೂಹಲ ಪಡೆದುಕೊಂಡಿದೆ. ತುಮುಲ್ ಅನ್ನು ‘ಕೈ’ ತೆಕ್ಕೆಗೆ ತೆಗೆದುಕೊಳ್ಳಲು ರಾಜಣ್ಣ ಈಗಾಗಲೇ ದಾಳ ಉರುಳಿಸಿದ್ದಾರೆ ಎನ್ನಲಾಗಿದೆ. 1351 ಹಾಲು ಉತ್ಪಾದಕರ ಸಂಘಗಳಿದ್ದು, 1283 ಡೇರಿಗಳು ಕಾರ್ಯನಿರತವಾಗಿವೆ. ಇದರಲ್ಲಿ 323 ಡೇರಿ ಮಹಿಳೆಯರ ಸಾರಥ್ಯದಲ್ಲಿರುವುದು ವಿಶೇಷ, ಜಿಲ್ಲೆಯ 10 ತಾಲೂಕುಗಳಿಂದ ತಲಾ ಒಬ್ಬರಂತೆ 10 ನಿರ್ದೇಶಕರು ಆಯ್ಕೆಯಾಗಿದ್ದು, ಸಹಜವಾಗಿ ತುಮುಲ್ ಮೇಲೆ ಹಿಡಿತ ಸಾಧಿಸುವುದು ಮೂರು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆ ಎನಿಸಲಿದೆ.
ಕೈ ಪಾಳಯದಲ್ಲಿ ಜೋರಾದ ಪೈಪೋಟಿ!: ತುಮುಲ್ ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿ ಮಧುಗಿರಿಯ ಬಿ.ನಾಗೇಶಬಾಬು, ಗುಬ್ಬಿ ಕೆ.ಪಿ.ಭಾರತಿದೇವಿ, ತಿಪಟೂರು ಪ್ರಕಾಶ್ ಹಾಗೂ ತುಮಕೂರು ತಾಲೂಕಿನ ಎಚ್.ಎ.ನಂಜೇಗೌಡ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಕೊನೆಯ ಕ್ಷಣದವರೆಗೂ ಯಾರು ಏನೇ ಕಸರತ್ತು ನಡೆಸಿದರೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ತೀರ್ಮಾನವೇ ಅಂತಿಮವಾಗಿರಲಿದೆ. ತುಮುಲ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಚುನಾಯಿತ 10 ನಿರ್ದೇಶಕರು ಸೇರಿದಂತೆ ಒಟ್ಟು 15 ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಮತದಾನ ಹಕ್ಕು ಹೊಂದಿದ್ದಾರೆ. ಕಾಂಗ್ರೆಸ್ ಬೆಂಬಲಿತ 5 ನಿರ್ದೇಶಕರ ಜತೆಗೆ ಸ್ವಾಭಾವಿಕವಾಗಿ ಸರ್ಕಾರದ ಪರವಾಗಿಯೇ ಮತಚಲಾಯಿಸುವ ಕೆಎಂಎಫ್ ಪ್ರತಿನಿಧಿ, ಸರ್ಕಾರದ ನಾಮನಿರ್ದೇಶಿತ 1, ಜಿಲ್ಲಾ ಸಹಕಾರ ಸಂಘಗಳ ಜಂಟಿ ನಿಬಂಧಕ 1, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ 1, ಎನ್‌ಡಿಡಿಬಿ ಒಬ್ಬರು ಸೇರಿ ಐದು ಒಟ್ಟು 10 ಸದಸ್ಯರ ಬೆಂಬಲ ಕಾಂಗ್ರೆಸ್ ಗೆ ಸುಲಭವಾಗಿರುವುದರಿಂದ ಆ ಪಕ್ಷ ಸೂಚಿಸಿದವರೇ ಅಧ್ಯಕ್ಷರಾಗಲಿದ್ದಾರೆ.
ಸಹಕಾರ ಸಚಿವ ರಾಜಣ್ಣ ಬೆಂಬಲಿಗನಿಗೆ ಅದೃಷ್ಲ ಪ್ರತಿಷ್ಠಿತ ತುಮುಲ್ ಅಧ್ಯಕ್ಷಗಾದಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಾಗೇಶ ಬಾಬು ಅಧ್ಯಕ್ಷರಾಗುವ ಅವಕಾಶ ಒದಗಿಬಂದಿದ್ದು, ಮತ್ತೊಮ್ಮೆ ಮಧುಗಿರಿ ತಾಲೂಕು ಸುದ್ದಿಯಲ್ಲಿದೆ.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಸಂಪೂರ್ಣ ಬೆಂಬಲವಿರುವ ತುಮುಲ್ ಮಾಜಿ ಅಧ್ಯಕ್ಷ ಬಿ.ನಾಗೇಶಬಾಬು ಅವರಿಗೆ ಮತ್ತೊಮ್ಮೆ ಅವಕಾಶ ಒದಗಿ ಬರಲಿದೆ ಎಂಬ ಮಾತು ಕೇಳಿಬಂದಿವೆ. ಸ್ಪಷ್ಟ ಬಹುಮತ ಹೊಂದಿರುವ ಕಾಂಗ್ರೆಸ್‌ಗೆ ಚಿಕ್ಕನಾಯಕನಹಳ್ಳಿ, ತುರುವೇಕೆರೆ ಸದಸ್ಯರ ಬೆಂಬಲವೂ ಸಿಕ್ಕಿದ್ದು, ಅವಿರೋಧ ಆಯ್ಕೆ ನಿಶ್ಚಿತ ಎನ್ನಿಸಿದೆ.
ಬಿ.ನಾಗೇಶಬಾಬು ತುಮುಲ್ ಅಧ್ಯಕ್ಷ ಸ್ಥಾನಕ್ಕಾಗಿ ‘ರಾಜಕೀಯ ಚಟುವಟಿಕೆ ಬಿರುಸುಗೊಳಿಸಿದ್ದು, ಎಲ್ಲ ಪ್ರಮುಖ ಮುಖಂಡರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿರುವುದು ಕುತೂಹಲ ಮೂಡಿಸಿದೆ. 2013 ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲದಿAದಲೇ ಗೆದ್ದು ತುಮುಲ್ ಅಧ್ಯಕ್ಷರಾಗಿದ್ದ ಕೊಂಡವಾಡಿ ಚಂದ್ರಶೇಖರ್ 2023ರ ನಂತರ ಜೆಡಿಎಸ್ ಜತೆ ಗುರುತಿಸಿಕೊಂಡಿದ್ದಾರೆ. ಹಾಲು ಒಕ್ಕೂಟಗಳ ಮೇಲೆ ಹಿಡಿತ ಹೊಂದಿರುವ ಚಂದ್ರಶೇಖರ್ ವಿರುದ್ಧ ಬಿ.ನಾಗೇಶಬಾಬು ತೀವ್ರ ಹಣಾಹಣಿಯಲ್ಲಿ ಗೆಲುವು ಸಾಧಿಸಿದ್ದಾರೆ. ಕೊಂಡವಾಡಿ ಚಂದ್ರಶೇಖರ್ ಹಾಗೂ ಸಚಿವ ಕೆ.ಎನ್.ರಾಜಣ್ಣ ನಡುವಿನ ರಾಜಕೀಯ ಜಿದ್ದಾಜಿದ್ದಿ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.

(Visited 1 times, 1 visits today)