ಬೆಂಗಳೂರು:
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಪದ್ಮಶ್ರೀ ಪುರಸ್ಕೃತೆ ಡಾ.ಸೂಲಗಿತ್ತಿ ನರಸಮ್ಮ(98) ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಗರದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೃಷ್ಣಾಪುರದವರಾದ ಸೂಲಗಿತ್ತಿ ನರಸಮ್ಮ ಆಸ್ಪತ್ರೆ ಹಾಗೂ ವೈದ್ಯರಿಲ್ಲದ ಕಾಲದಲ್ಲಿ ಹೆರಿಗೆ ತಜ್ಞೆಯಾಗಿದ್ದರು. ಸುಮಾರು 15 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ ಕೀರ್ತಿ ಅವರದ್ದು, ವೈದ್ಯರು ಇಲ್ಲದ ಕಾಲದಲ್ಲಿ ವೈದ್ಯರಂತೆ ಹೆರಿಗೆ ಮಾಡಿಸಿದ್ದರು. 2018ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಇವರು ಭಾಜನರಾಗಿದ್ದರು. ಕಳೆದ 25 ದಿನಗಳಿಂದ ಬಿಜಿಎಸ್ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆ, ವಯೋಸಹಜ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು.
ಆಸ್ಪತ್ರೆ, ವೈದ್ಯರು ಇಲ್ಲದ ಕಾಲದಲ್ಲಿ ಪ್ರಸೂತಿ ತಜ್ಞೆಯಾಗಿದ್ದ ನರಸಮ್ಮನವರ ಅಪರಿಮಿತವಾದ ಸಾಧನೆಯನ್ನು ಗುರುತಿಸಿ ಕೇಂದ್ರ ಸರಕಾರವು 2018ನೇ ಸಾಲಿನಲ್ಲಿ ದೇಶದ ಪ್ರತಿಷ್ಠಿತ ನಾಗರಿಕ ಸನ್ಮಾನ ‘ಪದಶ್ಮೀ’ ನೀಡಿ ಗೌರವಿಸಿತ್ತು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸೂಲಗಿತ್ತಿ ನರಸಮ್ಮ ಅವರ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ ಹಾಗೂ ಕುಟುಂಬಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿ ಗಳು ತಮ್ಮ ಸಂದೇಶ ದಲ್ಲಿ ತಿಳಿಸಿದ್ದಾರೆ.