ತುಮಕೂರು: ಮಣೆಗಾರ ಕೃತಿಯಲ್ಲಿ ದಲಿತ ಸಮುದಾಯದಲ್ಲಿನ ಬಡತನ, ದೌರ್ಜನ್ಯ, ಕ್ರೌರ್ಯ, ಅಸಹಾಯಕತೆಯನ್ನು ತುಂಬಾಡಿ ರಾಮಯ್ಯ ಮನಮುಟ್ಟುವಂತೆ ಚಿತ್ರಿಸಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ಡಿವಿಜಿ ಕನ್ನಡ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಹಾಗೂ ತುಂಬಾಡಿ ರಾಮಯ್ಯ ಸ್ನೇಹ ಬಳಗದ ಸಂಯುಕ್ತಾಶ್ರಯದಲ್ಲಿ ಬುಧವಾರ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ `ಮಣೆಗಾರ 25’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಡತನ ಶ್ರೇಣಿಕರಣದ ಅತ್ಯಂತ ಕೆಳಮಟ್ಟದಲ್ಲಿ ಇರುವಂತಹ ದಲಿತರ ಮೇಲೆ ಮೇಲ್ವರ್ಗದವರಿಂದ ಆಗುವ ದೌರ್ಜನ್ಯಗಳು, ಅವಮಾನ, ಕ್ರೌರ್ಯಗಳನ್ನು ಈ ಪುಸ್ತಕದಲ್ಲಿ ಕಾಣಬಹುದು ಎಂದರು.
ಪತ್ರಕರ್ತ ರಘುನಾಥ್ ಚ. ಹ. ಮಾತನಾಡಿ, ಈ ಕೃತಿಯಲ್ಲಿ ಸಾಂಸ್ಕೃತಿಕ ಸಾಮಾಜಿಕ ಮಹತ್ವ ಎದ್ದು ಕಾಣಿಸುತ್ತದೆ. ಈ ಕೃತಿಯ ಮುಖಾಂತರ ಮಣೆಗಾರ ಎಂಬ ವ್ಯಕ್ತಿಯನ್ನು ವಿಶ್ವಮಾನವನನ್ನಾಗಿ ಲೇಖಕರು ಚಿತ್ರಿಸಿದ್ದಾರೆ. ಸೃಜನಶೀಲ ಭಾಷೆಯ ಉಪಯೋಗ ಮತ್ತು ಕಹಿಯನ್ನು ಮೀರಿದ ಕಾರುಣ್ಯ, ಶೋಷಣೆಯ ವಿರುದ್ಧದ ತಣ್ಣನೆಯ ಧ್ವನಿಯ ಮೂಲಕ ಸಾಂಸ್ಕೃತಿಕ ಅನನ್ಯತೆಯನ್ನು ಕಟ್ಟುವಲ್ಲಿ ಈ ಕೃತಿ ಯಶಸ್ವಿಯಾಗಿದೆ ಎಂದರು. ವಿಮರ್ಶಕಿ ಡಾ. ಎಂ. ಎಸ್. ಆಶಾದೇವಿ ಮಾತನಾಡಿ, ಮಣೆಗಾರ ಕೃತಿಯು ಈ ಕಾಲಘಟ್ಟದ ರಾಜಕೀಯ ಹಾಗೂ ಸಾಂಸ್ಕೃತಿಕ ಪಠ್ಯಗಳಲ್ಲಿ ಒಂದಾಗುತ್ತದೆ. ಇಲ್ಲಿಯವರೆಗೂ ನಡೆಯುತ್ತಿರುವ ಹೆಣ್ಣು ಮತ್ತು ದಲಿತರಿಗೆ ಆದ ಶೋಷಣೆಗೆ ಈ ಕೃತಿಯು ಹೊಸ ದಾರಿಯನ್ನು ಸೂಚಿಸುತ್ತದೆ. ನಾವು ಹಾಕುವ ಚಪ್ಪಲಿ ಕಲ್ಲು ಮತ್ತು ಮುಳ್ಳಿನಿಂದ ಹೇಗೆ ತಡೆಯುತ್ತದೆಯೋ ಹಾಗೆ ನಾವು ನಡೆಯುವ ದಾರಿಗೆ ಪ್ರೀತಿ ಮತ್ತು ವಿಶ್ವಾಸದ ಚಪ್ಪಲಿಯನ್ನು ಹಾಕಬೇಕು. ಎಂದು ಹೇಳಿದರು. ‘ಮಣೆಗಾರ’ ಕೃತಿಯ ಲೇಖಕರಾದ ತುಂಬಾಡಿ ರಾಮಯ್ಯ, ಚಿತ್ರಕಲಾವಿದ ಡಾ. ಎಂ. ಎಸ್. ಮೂರ್ತಿ, ಚರಕ ಆಸ್ಪತ್ರೆಯ ಡಾ. ಬಸವರಾಜು, ಗಾಯಕರಾದ ವಿರೂಪಾಕ್ಷ ಡ್ಯಾಗೇರಹಳ್ಳಿ, ಜೋಗಿಲ ಸಿದ್ದರಾಜು ಇನ್ನಿತರರು ಉಪಸ್ಥಿತರಿದ್ದರು.
(Visited 1 times, 1 visits today)