ತುಮಕೂರು : ರಾಷ್ಟçದ ರಾಜಧಾನಿ ನವದೆಹಲಿಯ ಕರ್ತವ್ಯ ಪಥದಲ್ಲಿ ಜನವರಿ 26ರ ಭಾನುವಾರ ನಡೆದ ಗಣರಾಜ್ಯೋತ್ಸವ ಸ್ತಬ್ಧಚಿತ್ರ ಪಥ ಸಂಚಲನದಲ್ಲಿ ಸರ್ವಜನಾಂಗದ ಶಾಂತಿಯ ತೋಟದಂತೆ ಕಂಗೊಳಿಸುತ್ತಿರುವ ‘ಲಕ್ಕುಂಡಿ : ಶಿಲ್ಪಕಲೆಯ ತೊಟ್ಟಿಲುʼ ರಾಜ್ಯದ ಸ್ತಬ್ಧಚಿತ್ರವು ನೆರೆದ ಜನಸ್ತೋಮವನ್ನು ಮಂತ್ರಮುಗ್ಧರನ್ನಾಗಿಸಿದ್ದಲ್ಲದೇ, ಚಪ್ಪಾಳೆಯ ಕರತಾಡನದ ಮೂಲಕ ಅದ್ದೂರಿ ಸ್ವಾಗತ ದೊರೆಯಿತು.
ರಾಜಧಾನಿಯ ಕರ್ತವ್ಯ ಪಥದಲ್ಲಿ ರಾಜ್ಯದ ಸ್ತಬ್ಧಚಿತ್ರ ಸಾಗುವುದರೊಂದಿಗೆ ಕರ್ನಾಟಕ ರಾಜ್ಯದ ಹಿರಿಮೆ, ಸರ್ವಧರ್ಮ ಸಮನ್ವಯ, ಶಾಂತಿ, ಸಹಬಾಳ್ವೆಯನ್ನು ಪ್ರತಿಪಾದಿಸಿತು.
ಕರ್ನಾಟಕ ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರತಿ ವರ್ಷ ತನ್ನ ವೈಶಿಷ್ಟಪೂರ್ಣ ಸ್ತಬ್ಧಚಿತ್ರಗಳ ಮೂಲಕವೇ ದೇಶದ ಗಮನ ಸೆಳೆಯುತ್ತಿದೆ. ನಮ್ಮ ರಾಜ್ಯವು ವರ್ಷದಿಂದ ವರ್ಷಕ್ಕೆ ಹೊಸ ಮೈಲಿಗಲ್ಲನ್ನು ಸ್ಥಾಪಿಸುತ್ತಲೇ ಸಾಗಿದ್ದು, ಈ ಬಾರಿ ಲಕ್ಕುಂಡಿಯ ಶಿಲ್ಪಕಲೆಯಿಂದ ಕೂಡಿರುವ ಐತಿಹಾಸಿಕ ದೇವಾಲಯಗಳು ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿತು. ನಿಗಧಿತ ರೂಪು-ರೇಷೆಗಳಂತೆ ಈ ಸ್ತಬ್ಧಚಿತ್ರ ದಿನಗಳ ಲೆಕ್ಕದಲ್ಲಿ ಮೈದಳೆದಿದೆ. ಕಡಿಮೆ ಅವಧಿಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಸ್ತಬ್ಧಚಿತ್ರ ಕಣ್ಣಿಗೆ ಕಟ್ಟುವ ರೀತಿಯಲ್ಲಿ ಮೂಡಿ ಬಂದಿದ್ದು ವಿಶೇಷ ಎನಿಸಿದೆ. ಅಹಿಂಸಾವಾದಿಯ ನೆಲೆಬೀಡು, ಶಿಲ್ಪಕಲೆಯ ತೊಟ್ಟಿಲಾದ ಲಕ್ಕುಂಡಿಯಲ್ಲಿ ಶೈವ, ಜೈನ ಮತ್ತು ವೈಷ್ಣವ ದೇವಾಲಯಗಳಿವೆ. ಕಲಾತ್ಮಕತೆಯಿಂದ ಕಂಗೊಳಿಸುವ ಇಲ್ಲಿನ ದೇವಾಲಯಗಳು ಸ್ತಬ್ಧಚಿತ್ರದಲ್ಲಿ ಅವುಗಳ ಪಡಿಯಚ್ಚಿನಂತೆ ಮೂಡಿ ಬಂದಿದ್ದು, ದೇವಾಲಯವೇ ಮರುಜೀವ ತಳೆದಂತಿದೆ. ರಾಜ್ಯವು ಪ್ರಸ್ತುತಪಡಿಸುತ್ತಿರುವ ಈ ಸ್ತಬ್ಧಚಿತ್ರವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸ್ತಬ್ಧಚಿತ್ರದಲ್ಲಿ ಲಕ್ಕುಂಡಿಯ ದೇವಾಲಯಗಳು ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರ ಉಸ್ತುವಾರಿಯಲ್ಲಿ ಅಂತರರಾಷ್ಟಿçÃಯ ಖ್ಯಾತಿಯ ಕಲಾ ನಿರ್ದೇಶಕ ಶಶಿಧರ ಅಡಪ ಕಲಾ ನಿರ್ದೇಶನ ಮಾಡಿದ್ದರು. ಸಂಗೀತ ನಿರ್ದೇಶಕ ಪ್ರವೀಣ್ ಡಿ.ರಾವ್ ಅವರು ಕನ್ನಡ ಸಾಹಿತ್ಯ ಇರುವ ಸುಮಧುರವಾದ ಸಂಗೀತ ಕರ್ತವ್ಯ ಪಥದಲ್ಲಿ ನಿನಾದಿಸಿ ಕೇಳುಗರ ಮನಸೂರೆಗೊಂಡಿತು.

(Visited 1 times, 1 visits today)