ತುಮಕೂರು : ಸ್ಥಳೀಯ ಸಂಸ್ಥೆಗಳಿಗೆ ಕಾಲ-ಕಾಲಕ್ಕೆ ಚುನಾವಣೆಗಳು ನಡೆದಾಗ ಮಾತ್ರ ಹಣಕಾಸು ಆಯೋಗವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆ ಮಾಡಲಿದೆ ಎಂದು 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ: ಸಿ. ನಾರಾಯಣಸ್ವಾಮಿ ತಿಳಿಸಿದರು.
ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ 5ನೇ ರಾಜ್ಯ ಹಣಕಾಸು ಆಯೋಗದ ವಿಷಯಗಳ ಕುರಿತು ಜಿಲ್ಲಾ ಪಂಚಾಯತಿಯಲ್ಲಿ ಬುಧವಾರ ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕೇಂದ್ರ ಹಣಕಾಸು ಆಯೋಗವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಹಂಚಿಕೆ ಮಾಡುವ ಸಂದರ್ಭದಲ್ಲಿ ರಾಜ್ಯ ಹಣಕಾಸು ಆಯೋಗದ ಶಿಫಾರಸ್ಸುಗಳನ್ನು ಗಮನದಲ್ಲಿಟ್ಟುಕೊಂಡು ಹಂಚಿಕೆ ಮಾಡಲಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ ನಿರ್ಮಾಣ, ವಿದ್ಯುತ್ ಸೇರಿದಂತೆ ಜನಸಾಮಾನ್ಯರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸ್ಥಳೀಯ ಸಂಸ್ಥೆಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
“ತೆರಿಗೆ ಮೊದಲು-ಸೇವೆ ನಂತರ” ಎಂಬ ಧ್ಯೇಯವಾಕ್ಯದಡಿ ತೆರಿಗೆಯನ್ನು ಸಂಪೂರ್ಣವಾಗಿ ಪಾವತಿಸಿ ಸರ್ಕಾರದ ಸೇವೆಗಳನ್ನು ಪಡೆಯಬೇಕೆಂಬ ಸಂದೇಶವನ್ನು ಜನರಿಗೆ ಮುಟ್ಟಿಸಬೇಕು. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತೆರಿಗೆ ವಸೂಲಾತಿ ಮಾಡುವ ಮೂಲಕ ಸ್ಥಳೀಯವಾಗಿ ಆರ್ಥಿಕ ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳಬೇಕು ಎಂದರು. ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಆಯೋಗದ ಸದಸ್ಯರಾದ ಮೊಹಮದ್ ಸನಾವುಲ್ಲಾ, ಆರ್.ಎಸ್. ಪೋಂಡೆ, ಕಾರ್ಯದರ್ಶಿ ಉಜ್ವಲ್ ಕುಮಾರ್ ಘೋಷ್, ಸಮಾಲೋಚಕರಾದ ಎಂ.ಕೆ. ಕೆಂಪೇಗೌಡ ಹಾಗೂ ಜಿ. ಸುಪ್ರಸನ್ನ, ಇದ್ದರು.
(Visited 1 times, 1 visits today)