ತುಮಕೂರು: ಯಾವುದೇ ಸಾಹಿತ್ಯ ಜೀವನದ ನೇರ ಪ್ರತಿಬಿಂಬವಲ್ಲ. ಜೀವನದಲ್ಲಿ ಇಲ್ಲದೆ ಇರುವುದು ಸಾಹಿತ್ಯದಲ್ಲಿ ಇರುತ್ತದೆ. ಇದು ಮೂಲಭೂತವಾಗಿ ಸಾಹಿತ್ಯ ಅಷ್ಟೇ ಅಲ್ಲ, ಎಲ್ಲಾ ಕಲೆಗಳಿಗೂ ಅನ್ವಯಿಸುತ್ತದೆ ಎಂದು ಕಥೆಗಾರ ಎಸ್. ದಿವಾಕರ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಡಿವಿಜಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮಂಗಳವಾರ ಹಮ್ಮಿಕೊಂಡಿದ್ದ ‘ಸಣ್ಣ ಕಥೆ: ಒಂದು ಅನುಸಂಧಾನ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಣ್ಣ ಕಥೆ, ಒಂದು ಹಾಸ್ಯ ಪ್ರಸಂಗ, ಗದ್ಯ ಅಥವಾ ಒಂದು ಘಟನೆಯ ವರದಿ ಮತ್ತು ಒಬ್ಬ ವ್ಯಕ್ತಿಯ ಚಿತ್ರಣ ಅಲ್ಲ, ಇದು ಕಥೆಯದ್ದೇ ಮತ್ತೊಂದು ಆಯಾಮವಾಗಿದೆ. ಕಥೆ ಸೃಷ್ಟಿಯಾಗುವುದು ಜೀವನದ ಅನುಭವಗಳಿಂದ ಎಂಬುದಕ್ಕಿAದಲೂ ಸುತ್ತಲಿನ ವಾತಾವರಣ ಹಾಗೂ ಕಲ್ಪನಾಶಕ್ತಿಯಿಂದ ಎಂದರು.
ಕಥೆಗಳನ್ನು ಮೌಖಿಕವಾಗಿಯೇ ಹೇಳುವ ಕಾಲವಿತ್ತು.
ಈಗ ಪುಸ್ತಕದಲ್ಲಿ ಓದಬೇಕಿದೆ. ಕಥೆ ಚಿಕ್ಕದಾದರೂ ಪಾತ್ರಗಳನ್ನು ಹಿಡಿದಿಟ್ಟುಕೊಂಡು ಓದಿಸಿಕೊಳ್ಳುವಂತಿರಬೇಕು. ಸಂಗೀತ, ನಾಟಕ, ಚಿತ್ರಕಲೆ, ನೃತ್ಯ ಕಲೆ ಇವುಗಳಿಗೆಲ್ಲ ಪಠ್ಯಕ್ರಮ ಹಾಗೂ ಗುರುಗಳ ಅವಶ್ಯಕತೆ ಇದೆ. ಆದರೆ ಸಾಹಿತ್ಯ, ಸಣ್ಣ ಕಥೆಗಳ ರಚನೆಗೆ ಪಠ್ಯಕ್ರಮದ ಅವಶ್ಯಕತೆ ಇರುವುದಿಲ್ಲ; ಆಲೋಚನಾಶಕ್ತಿ ಹಾಗೂ ಬರವಣಿಗೆಯ ಸಾಮರ್ಥ್ಯ ಅಗತ್ಯ ಎಂದರು.
ಕನ್ನಡದಲ್ಲಿ ಪ್ರಥಮ ಪುರುಷ ಹಾಗೂ ತೃತೀಯ ಪುರುಷ ಪ್ರಯೋಗದ ಕಥೆಗಳೇ ಹೆಚ್ಚು. ದ್ವಿತೀಯ ಪುರುಷ ಪ್ರಯೋಗದ ಕಥೆಗಳು ತೀರಾ ವಿರಳ. ಪಶ್ಚಿಮದಲ್ಲಿ ಈ ಪ್ರಯೋಗಗಳು ಆಗಿವೆ. ಇಂತಹ ಪ್ರಯೋಗಗಳು ಕನ್ನಡದಲ್ಲೂ ಆಗಬೇಕು ಎಂದರು. ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ನಿತ್ಯಾನಂದ ಬಿ. ಶೆಟ್ಟಿ, ಡಾ. ಎಸ್. ಪಿ. ಪದ್ಮಪ್ರಸಾದ್ ಮತ್ತಿತರರು ಹಾಜರಿದ್ದರು.

(Visited 1 times, 1 visits today)