ತುಮಕೂರು : ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಮಂಗಳವಾರ ನಗರದ ಎಪಿಎಂಸಿ ಯಾರ್ಡ್ನಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮಧ್ಯವರ್ತಿಗಳನ್ನು ಸಂಪರ್ಕಿಸಬೇಡಿಃ
ನಂತರ ರೈತರೊಂದಿಗೆ ಮಾತನಾಡಿದ ಅವರು, ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ಜಿಲ್ಲೆಯಲ್ಲಿ ತೆರೆದಿರುವ 10 ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ರೈತರು ಖರೀದಿ ಕೇಂದ್ರದಲ್ಲಿ ಮಧ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ನಿಯೋಜಿತ ಅಧಿಕಾರಿಗಳನ್ನೇ ಸಂಪರ್ಕಿಸಬೇಕೆAದು ಮನವಿ ಮಾಡಿದರು.
ನೋಂದಣಿಗೆ ಮಾರ್ಚ್ ಅಂತ್ಯದವರೆಗೂ ಅವಕಾಶಃ
ಖರೀದಿ ಕೇಂದ್ರಗಳಲ್ಲಿ ರಾಗಿ ಖರೀದಿಗಾಗಿ ಮಾರ್ಚ್ 31ರವರೆಗೆ ಮಾತ್ರ ಅವಕಾಶವಿದ್ದು, ರೈತರು ತಡ ಮಾಡದೇ ಅಗತ್ಯ ದಾಖಲೆಗಳೊಂದಿಗೆ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ನೋಂದಣಿ ಮಾಡಿಸಿ ಬೆಂಬಲ ಬೆಲೆ ಯೋಜನೆಯ ಸದುಪಯೋಗ ಪಡೆಯಬೇಕೆಂದರು.
ರಾಗಿ ಮಾರಾಟಕ್ಕೆ ಫ್ರೂಟ್ಸ್ ಐಡಿ ಕಡ್ಡಾಯಃ
ಖರೀದಿ ಕೇಂದ್ರದಲ್ಲಿ ರೈತರು ರಾಗಿ ಮಾರಾಟ ಮಾಡಲು ಕಡ್ಡಾಯವಾಗಿ ಫ್ರೂಟ್ಸ್ ಐಡಿ ಹೊಂದಿರಬೇಕು. ಫ್ರೂಟ್ಸ್ ಐಡಿಗೆ ಸೇರ್ಪಡೆಗೊಂಡಿರುವ ಸರ್ವೆ ನಂಬರ್‌ಗಳಲ್ಲಿ ಬೆಳೆದ ರಾಗಿಯನ್ನು ಮಾತ್ರ ಖರೀದಿ ಕೇಂದ್ರಗಳಲ್ಲಿ ಖರೀದಿಸಲಾಗುವುದು. ಸರ್ವೆ ನಂಬರ್‌ಗಳಲ್ಲಿ ರಾಗಿ ಬೆಳೆದಿರುವ ಬಗ್ಗೆ ಬೆಳೆ ಸಮೀಕ್ಷೆಯಲ್ಲಿ ದಾಖಲಾಗಿರುವುದು ಕಡ್ಡಾಯವೆಂದು ತಿಳಿಸಿದರು. ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಜಂಟಿ ಕೃಷಿ ನಿರ್ದೇಶಕ ಡಾ: ರಮೇಶ್, ರೈತಬಂಧುಗಳು ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.

(Visited 1 times, 1 visits today)