ತುಮಕೂರು: ವಿದ್ಯಾರ್ಥಿಗಳು ಮೊಬೈಲ್ ಮೋಹಕ್ಕೆ ಬೀಳದೆ, ಉನ್ನತ ಗುರಿ ಇಟ್ಟುಕೊಂಡು, ಛಲದಿಂದ ಗುರಿ ಸಾಧಿಸುವತ್ತ ಗಮನ ಹರಿಸಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎದುರಾಗುವ ಎಲ್ಲಾ ಸ್ಪರ್ಧೆಗಳನ್ನೂ ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಶಾಸಕ ಬಿ.ಸುರೇಶ್‌ಗೌಡರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಬೆಳ್ಳಾವಿಯಲ್ಲಿ ಗುರುವಾರ 5 ಕೋಟಿ ರೂ. ವೆಚ್ಚದ ಸರ್ಕಾರಿ ಪದವಿ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ನಂತರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಶಾಸಕರು, 2019ರಲ್ಲಿ ಬೆಳ್ಳಾವಿಯಲ್ಲಿ ಸರ್ಕಾರಿ ಪದವಿ ಕಾಲೇಜು ಪ್ರಾರಂಭವಾಯಿತು. ಆದರೆ ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ಕಾಲೇಜು ಈಗ ನಡೆಯುತ್ತಿದೆ. ಕಾಲೇಜಿನಲ್ಲಿ ಶೇಷ್ಠ ಉಪನ್ಯಾಸಕರಿದ್ದಾರೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದಾರೆ. ಈ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತಹ ಸುಸಜ್ಜಿತ ಕಾಲೇಜು ಕಟ್ಟಡ ನಿರ್ಮಾಣ ಮಾಡಿ, ಅಗತ್ಯ ಸೌಲಭ್ಯ ಒದಗಿಬೇಕೆಂಬ ತಮ್ಮ ಪ್ರಯತ್ನದ ಫಲವಾಗಿ ಈಗ ಕಟ್ಟಡಕ್ಕೆ ಶಂಕುಸ್ಥಾನೆ ಮಾಡಲಾಗಿದೆ. ಹತ್ತು ತಿಂಗಳಲ್ಲಿ ಕಾಲೇಜು ಕಟ್ಟಡ ನಿರ್ಮಾಣವಾಗಿ ಹೊಸ ಕಟ್ಟಡದಲ್ಲಿ ಕಾಲೇಜು ಚಟುವಟಿಕೆಗಳು ಆರಂಭವಾಗಲಿವೆ ಎಂದರು.
ಸದ್ಯ ಈ ಪದವಿ ಕಾಲೇಜಿನಲ್ಲಿ ಕಲಾ ಹಾಗೂ ವಾಣಿಜ್ಯ ಕೋರ್ಸ್ಗಳಿವೆ. ಹೆಚ್ಚುವರಿ ಕೋರ್ಸ್ಗಳನ್ನು ತರಬೇಕು. ಉದ್ಯೋಗ ಆಧಾರಿತ ಕೋರ್ಸ್ಗಳಿಗೆ ಆದ್ಯತೆ ನೀಡಬೇಕು. ಈ ಶೈಕ್ಷಣಿಕ ಸಾಲಿನಲ್ಲೇ ಕಾಲೇಜಿಗೆ ಬಿಸಿಎ ಕೋರ್ಸ್ ತಂದು, ಆಸಕ್ತ ಬಿಎ ವಿದ್ಯಾರ್ಥಿಗಳು ಬಿಸಿಎ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಕಾಲೇಜು ಆಡಳಿತ ಮಂಡಳಿಗೆ ಸೂಚಿಸಿದರು.
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಲು ಉಪನ್ಯಾಸಕರು ಹೆಚ್ಚಿನ ಆಸಕ್ತಿ ತೋರಬೇಕು, ಅವರಿಗೆ ಅಗತ್ಯ ಮಾರ್ಗದರ್ಶನ ಶಿಬಿರಗಳನ್ನು ಆಯೋಜಿಸಿ ಉತ್ತಮ ಭವಿಷ್ಯ ರೂಪಿಸಲು ನೆರವಾಗಬೇಕು. ವಿದ್ಯಾರ್ಥಿಗಳು ತಾವು ಮುಂದೆ ಏನಾಗಬೇಕು, ಯಾವುದನ್ನು ಸಾಧಿಸಬೇಕು ಎಂದು ತಮ್ಮ ಆತ್ಮಸಾಕ್ಷಿಗೆ ಅನುಸಾರ ಗುರಿ ಹೊಂದಬೇಕು, ಗುರಿ ಸಾಧಿಸುವವರೆಗೂ ಬಿಡಬಾರದು. ಮನಸು ಕೆಡಿಸುವ ಆಕರ್ಷಣೆಗಳತ್ತ ಗಮನ ಹರಿಸದೆ, ಗುರಿ ಸಾಧನೆಯೇ ಧ್ಯೇಯವಾಗಬೇಕು. ಪದವಿ ನಂತರ ಉದ್ಯೋಗ ಪಡೆಯುವುದೇ ಮೂಲ ಉದ್ದೇಶ ಆಗಬಾರದು, ಹತ್ತಾರು ಜನರಿಗೆ ಉದ್ಯೋಗ ನೀಡುವ ರೀತಿಯಲ್ಲಿ ಬೆಳೆಯಬೇಕು ಎನ್ನುವ ದೊಡ್ಡ ಆಲೋಚನೆಗಳನ್ನು ಹೊಂದಬೇಕು ಎಂದು ಶಾಸಕ ಸುರೇಶ್‌ಗೌಡರು ಹೇಳಿದರು.
ಬೆಳ್ಳಾವಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಲೋಕಮ್ಮ, ಪದವಿ ಕಾಲೇಜು ಪ್ರಾಂಶುಪಾಲರಾದ ಪ್ರೊ ಸಿ.ಆರ್.ಶ್ರೀಧರ್, ಪಿಯೂ ಕಾಲೇಜು ಪ್ರಾಚಾರ್ಯ ಪತೇ ಅಹ್ಮದ್, ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ರೇಖಾವತಿ, ಗ್ರಾಮ ಪಂಚಾಯ್ತಿ ಸದಸ್ಯರಾದ ನಂದೀಶ್, ದೊಡ್ಡಯ್ಯ, ಜಯಲಕ್ಷö್ಮಮ್ಮ, ನರಸಿಂಹಮೂರ್ತಿ, ರೈಟ್ಸ್ ಇಂಜಿನಿಯರ್ ಮನು, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಗೂಳೂರು ಶಿವಕುಮಾರ್, ಮುಖಂಡರಾದ ನಟರಾಜು, ಮೋಹನ್, ಓಂಕಾರಸ್ವಾಮಿ, ರಘುನಾಥ್, ರಾಜಶೇಖರ್, ಬಿ.ಕೆ.ಕುಮಾರ್, ಪಾಲಾಕ್ಷಯ್ಯ, ಜಯಣ್ಣ, ಶಿವರುದ್ರಯ್ಯ, ಸಿದ್ಧಗಂಗಯ್ಯ, ಭಾಗವಹಿಸಿದ್ದರು.

(Visited 1 times, 1 visits today)