ತುಮಕೂರು: ವಾಣಿಜ್ಯ ಮಳಿಗೆಗಳು, ಕಚೇರಿ, ಕಾರ್ಖಾನೆಗಳ ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡ ಕಡ್ಡಾಯ ಬಳಕೆ ನಿಯಮ ಪಾಲನೆಯಾಗಬೇಕು. ಎಳನೀರಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ರೈತರಿಗೆ ನ್ಯಾಯಯುತ ಬೆಲೆ ದೊರೆಯುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಕನ್ನಡಪರ, ರೈತ ಹಾಗೂ ದಲಿತ ಸಂಘಟನೆಗಳ ಮುಖಂಡರು, ಬೀದಿಬದಿ ವ್ಯಾಪಾರಿಗಳು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬಿಜಿಎಸ್ ವೃತ್ತದಲ್ಲಿ ಮುಖಂಡರು ಕನ್ನಡ ಬಾವುಟ ಪ್ರದರ್ಶಿಸಿ ಮಾನವ ಸರಪಳಿ ನಿರ್ಮಿಸಿ ಕನ್ನಡ ರಕ್ಷಣೆ ಹಾಗೂ ರೈತರ ರಕ್ಷಣೆಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ತೆರಳಿ ಅಲ್ಲಿ ಪ್ರತಿಭಟನೆ ನಡೆಸಿದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಎಲ್ಲಾ ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡ ಬರಹ ಇರಬೇಕು, ತಪ್ಪಿದಲ್ಲಿ ಅಂತಹ ಮಳಿಗೆಗಳ ವ್ಯಾಪಾರ ಪರವಾನಗಿ ರದ್ದು ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಆದೇಶ ಮಾಡಿದ್ದರೂ, ನಗರದಲ್ಲಿ ಅದರ ಉಲ್ಲಂಘನೆ ಆಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾದ ನಗರಪಾಲಿಕೆ ಅಧಿಕಾರಿಗಳು ಅಂತಹ ವಾಣಿಜ್ಯ ಮಳಿಗೆಯವರಿಗೆ ಕನಿಷ್ಟ ಒಂದು ನೋಟೀಸೂ ನೀಡದೆ ಕಡೆಗಣಿಸಿದ್ದಾರೆ. ನಗರಪಾಲಿಕೆಯವರು ಮೂರು ದಿನಗಳಲ್ಲಿ ಸೂಕ್ತ ಕ್ರಮ ತೆಗೆದುಕೊಂಡು ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಬೇಕು, ತಪ್ಪಿದರೆ ಸಂಘಟನೆಗಳ ನೇತೃತ್ವದಲ್ಲಿ ಕನ್ನಡೇತರ ನಾಮಫಲಕಗಳನ್ನು ಕಿತ್ತುಹಾಕುವ ಆಂದೋಲನ ಮಾಡುವುದಾಗಿ ಎಚ್ಚರಿಕೆ ನೀಡಿದರು.
ನಗರ ಹಾಗೂ ಸುತ್ತಲಿನ ಕೈಗಾರಿಕಾ ಪ್ರದೇಶಗಳ ಕಾರ್ಖಾನೆಗಳಲ್ಲಿ ಕನ್ನಡ ಬಳಕೆಯನ್ನು ನಿರ್ಲಕ್ಷಿಸಲಾಗಿದೆ. ಶೇಕಡ 82ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ ಮೀಸಲಿಡಬೇಕು ಎಂಬ ಸರ್ಕಾರದ ಸೂಚನೆ ಇದ್ದರೂ ಕಾರ್ಖಾನೆ ಆಡಳಿತ ಮಂಡಳಿಯವರು ನಿಯಮ ಉಲ್ಲಂಘಿಸಿ ಹೊರ ರಾಜ್ಯದವರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಕಾರ್ಖಾನೆಗಳಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಜಿಲ್ಲಾಡಳಿತ ಇಂತಹ ಪ್ರಕರಣಗಳಿಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು, ಇಲ್ಲವಾದರೆ ಸಂಘಟನೆಗಳು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಧನಿಯಾಕುಮಾರ್ ಹೇಳಿದರು.
ಕರ್ನಾಕ ರಕ್ಷಣಾ ವೇದಿಕೆಯ ಕನ್ನಡ ಸೇನೆ ಅಧ್ಯಕ್ಷ ಅರುಣ್‌ಕುಮಾರ್ ಮಾತನಾಡಿ, ಕಲ್ಪತರು ನಾಡಿನಲ್ಲಿ ಎಳನೀರು ಮಾರಾಟದ ದಂಧೆ ನಡೆಯುತ್ತಿದೆ. ರೈತರಿಂದ ಕಡಿಮೆ ಬೆಲೆಗೆ ಎಳನೀರು ಖರೀದಿಸಿ ಗ್ರಾಹಕರಿಗೆ ದುಬಾರಿ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ. ಜೊತೆಗೆ ಹೊರಗಿನಿಂದ ಎಳನೀರು ತಂದು ಸ್ಥಳೀಯ ರೈತರಿಗೆ ಮಾರುಕಟ್ಟೆ ಸಿಗದಂತೆ ಮಾಡುವ ಅನ್ಯಾಯ ನಡೆಯುತ್ತಿದೆ ಎಂದರು.ರೈತ ಸಂಘದ ಕಾರ್ಯದರ್ಶಿ ಬಸವರಾಜು ಮಾತನಾಡಿ, ಎಳನೀರಿನ ವಿಷಯದಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ರೈತರಿಂದ 10-15 ರೂ.ಗೆ ಎಳನೀರು ಖರೀದಿಸಿ 50-60 ರೂ.ಗೆ ಮಾರುತ್ತಿದ್ದಾರೆ. ಇದರಿಂದ ಎಳನೀರು ಬೆಳೆಯುವ ರೈತರಿಗೆ, ಖರೀದಿಸುವ ಗ್ರಾಹಕರಿಗೆ ನ್ಯಾಯಯುತ ಬೆಲೆ ಸಿಗದೆ ಮಧ್ಯವರ್ತಿಗಳ ಪಾಲಾಗುತ್ತಿದೆ. ಜಿಲ್ಲಾಡಳಿತ ಈ ಅನ್ಯಾಯ ತಪ್ಪಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರ ಸ್ವೀಕರಿಸಿಲು ಬಂದ ಅಧಿಕಾರಿಗಳಿಗೆ ಕುಡಿಯಲು ಎಳನೀರು ಕೊಟ್ಟು ತಮ್ಮ ಬೇಡಿಕೆ ಈಡೇರಿಸಲು ಮನವಿ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ವೇದಿಕೆ ಅಧ್ಯಕ್ಷ ಕನ್ನಡ ಪ್ರಕಾಶ್, ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಂ.ಗೋಪಿ, ಮುಖಂಡರಾದ ಆರ್.ಎನ್.ವೆಂಕಟಾಚಲ, ಹೊಸಕೋಟೆ ನಟರಾಜ್, ರಕ್ಷಿತ್ ಕರಿಮಣ್ಣೆ, ಭಾಗವಹಿಸಿದ್ದರು.
(Visited 1 times, 1 visits today)