ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ಬಗ್ಗೆ ತೀರ ಹಗುರವಾಗಿ ಮಾತನಾಡುವುದನ್ನೇ ಚಟವಾಗಿ ಮಾಡಿಕೊಂಡಿರುವ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ, ಪ್ರಚಾರಕ್ಕಾಗಿ ಸರಕಾರವನ್ನು ಹಿಯಾಳಿಸುವುದನ್ನು ಕೈಬಿಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ತಾಕೀತು ಮಾಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದೇ ಪದೇ ಸರಕಾರ ಸತ್ತು ಹೋಗಿದೆ. ಜಿಲ್ಲೆಯಲ್ಲಿ ಅಭಿವೃದ್ದಿ ಕುಂಠಿತವಾಗಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವ ದಲ್ಲಿಯೇ ಜಿಲ್ಲೆಯಲ್ಲಿ ಎರಡು ಬೃಹತ್ ಫಲಾನುಭವಿಗಳ ಸಮಾವೇಶ ನಡೆದಿದೆ. ಸುಮಾರು 1500 ಕೋಟ ರೂಗಳ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಸವಲತ್ತುಗಳ ವಿತರಣೆ ಮಾಡಲಾಗಿದೆ. ಆ ಸಮಾರಂಭ ಗಳಲ್ಲಿ ಸ್ವತಹಃ ಶಾಸಕರೇ ಉಪಸ್ಥಿತರಿದ್ದು, ಹತ್ತಿರದಿಂದ ನೋಡಿದ್ದರೂ, ಟೀಕಿಸುವುದು ತರವಲ್ಲ ಎಂದರು.
ಜಿಲ್ಲೆಗೆ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಸುಮಾರು 3500 ಕೋಟಿ ರೂಗಳ ಅನುಧಾನ ನೀಡಲಾಗಿದೆ. ಮಹಾತ್ಮಗಾಂಧಿ ಕ್ರೀಡಾಂಗಣ, ದೇವರಾಜ ಅರಸು ಬಸ್ ನಿಲ್ದಾಣ ನಿರ್ಮಾಣಕ್ಕೆ ಸರಕಾರದಿಂದ ಹಣ ನೀಡಲಾಗಿದೆ. ಹಾಗಿದ್ದರೂ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಕೇವಲ ಸಿದ್ದಾರ್ಥ ಕಾಲೇಜಿಗೆ ಬಂದು ಹೋಗುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಹೇಳಿಕೆ ನೀಡುವ ಸುರೇಶಗೌಡರು, ಬೆಳಗಾದ ತಕ್ಷಣ,ಡಾ.ಜಿ.ಪರಮೇಶ್ವರ್ ಮನೆಗೆ ಹೋಗಿ ಕುಳಿತಿರುತ್ತಾರೆ. ಈ ರೀತಿಯ ದ್ವಂದ್ವ ಬಿಡಿ,ಪದೇ ಪದೇ ಈ ರೀತಿಯ ಅವಹೇಳನಕಾರಿ ಹೇಳಿಕೆಯನ್ನು ಕೈಬಿಡದಿದ್ದರೆ ನಾವು ಕೂಡ ನಿಮ್ಮಗೆ ಘೇರಾವ್ ಹಾಕುವ ಕಾಲ ದೂರವಿಲ್ಲ.ನಮ್ಮ ಕಾರ್ಯಕರ್ತರ ತಾಳ್ಮೆಗೂ ಮಿತಿ ಇದೆ ಎಂದು ಚಂದ್ರಶೇರಗೌಡ ನುಡಿದರು.
ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿದರು.
ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ತುಮಕೂರು ಗ್ರಾಮಾಂತರ ಶಾಸಕರಾಗಿರುವ ಬಿ.ಸುರೇಶಗೌಡ ಓರ್ವ ಫಲಾಯನವಾದಿ ರಾಜಕಾರಣಿ.2023ರ ವಿಧಾನಸಭಾ ಚುನಾವಣೆಯ ವೇಳೆ ಮತದಾರರಿಗೆ ನೀಡಿದ ಒಂದು ಭರವಸೆಯನ್ನು ಈಡೇರಿಸಿಲ್ಲ ಎಂದು ಅರೋಪಿಸಿದರು. ಈ ವೇಳೆ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಅಹಮದ್,ಸುಲ್ತಾನ್ ಮೊಹಮದ್, ಆರ್.ರಾಮಕೃಷ್ಣ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹೇಶ್,ಫೈಯಾಜ್,ಷಣ್ಮುಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 1 times, 1 visits today)