ಹುಳಿಯಾರು: ಮಾಗಡಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಆಯೋಜಿಸಿದ್ದ ಅಂತರ ಜಿಲ್ಲಾ ಮಟ್ಟದ ಪತ್ರಕರ್ತರ ಡಬಲ್ ಶಟಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ತುಮಕೂರು ಜಿಲ್ಲೆಯನ್ನು ಪ್ರತಿನಿಧಿಸಿದ್ದ ಹುಳಿಯಾರು ಪತ್ರಕರ್ತರಾದ ಯೋಗೀಶ್ ಹಾಗೂ ಸೋಮಶೇಖರ್ ಅವರು ದ್ವಿತೀಯ ಸ್ಥಾನ ಪಡೆದು 5 ಸಾವಿರ ರೂಪಾಯಿ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ಗೆದ್ದುಕೊಂಡಿದ್ದಾರೆ. ಪಂದ್ಯಾವಳಿಯಲ್ಲಿ ಚಾಮರಾಜ ನಗರ, ಕೊಡಗು, ಮೈಸೂರು, ಮಂಡ್ಯ, ರಾಮನಗರ, ಹಾಸನ, ತುಮಕೂರು ಸೇರಿ ಒಟ್ಟು 19 ತಂಡಗಳು ಭಾಗವಹಿಸಿದ್ದು, ಅದರಲ್ಲಿ ಮಾಗಡಿ ತಂಡದ ಕಿರಣ್ ಕುಮಾರ್ ಹಾಗೂ ಅಭಿಷೇಕ್ ಪ್ರಥಮ ಬಹುಮಾನ ಪಡೆಯುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ತುಮಕೂರಿನ ಸೋಮಶೇಖರ್ ಮತ್ತು ಯೋಗೇಶ್ ಅವರು ರನ್ನರ್ ಆಪ್ ಆಗಿ ದ್ವಿತೀಯ ಸ್ಥಾನ, ಹಾಸನದ ರವಿ ಮತ್ತು ರಾಘವೇಂದ್ರ ತೃತೀಯ ಬಹುಮಾನ ಪಡೆದಿದ್ದಾರೆ.
ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ, ಪತ್ರಕರ್ತರು ಯಾವಾಗಲೂ ಒತ್ತಡದಲ್ಲೇ ಕೆಲಸ ಮಾಡುತ್ತಿರುತ್ತಾರೆ. ಹಾಗಾಗಿ ಪತ್ರಕರ್ತರು ಕ್ರೀಡೆಯಲ್ಲಿ ಭಾಗವಹಿಸುವ ಗುಣ ಬೆಳಸಿಕೊಂಡರೆ ಉತ್ತಮ ಆರೋಗ್ಯ ತಮ್ಮದಾಗಿಸಿಕೊಳ್ಳಬಹುದು ಎಂದು ತಿಳಿಸಿದರು. ಪತ್ರಕರ್ತರು ಸದೃಢರಾಗಿದ್ದಾಗ ಮಾತ್ರ ನಾಯಕರನ್ನು ತಮ್ಮ ಬರಹಗಳ ಮೂಲಕ ಎಚ್ಚರಗೊಳಿಸಲು ಸಾಧ್ಯ. ಜತೆಗೆ ಈ ರೀತಿ ಅಂತರ್ ಜಿಲ್ಲಾ ಕ್ರೀಡಾಕೂಟವನ್ನು ಆಯೋಜಿಸಿದರೆ ಪರಸ್ಪರ ಸ್ನೇಹದ ಮನೋಭಾವ ಬೆಳೆದು, ಉತ್ತಮ ಬಾಂಧವ್ಯಕ್ಕೆ ವೇದಿಕೆ ಆಗುತ್ತದೆ ಎಂದರು. ಮಾಜಿ ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಪತ್ರಕರ್ತರು ಒಂದೆಡೆ ಸೇರಿ ಕ್ರೀಡಾಕೂಟ ಯೋಜನೆ ಮಾಡಿರುವುದು ಉತ್ತಮವಾದದ್ದು. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಉತ್ತಮ ಆರೋಗ್ಯ ಪಡೆಯಬಹುದು ಎಂದರು. ಮಾಜಿ ಶಾಸಕ ಎ.ಮಂಜುನಾಥ ಮಾತನಾಡಿ, ಒತ್ತಡ ನಿವಾರಣೆಯಾಗಲು ಕ್ರೀಡೆಯಲ್ಲಿ ಭಾಗವಹಿಸಬೇಕು. ಪತ್ರಕರ್ತರು ಸುದ್ದಿಯ ಹಿಂದೆ ಬೀಳುವುದರ ಜತೆಗೆ ಈ ರೀತಿ ಕ್ರೀಡಾಕೂಟಗಳನ್ನು ಆಯೋಜಿಸುತ್ತಿದ್ದರೆ ಮನರಂಜನೆ ಸಿಕ್ಕಿ ಅವರ ವೃತ್ತಿಯಲ್ಲೂ ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಎಚ್.ಎನ್.ಅಶೋಕ್, ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ಡಿ.ಎಸ್.ಕುಮಾರ್, ಶೈಲಜಾ, ರಾಮಕೃಷ್ಣಯ್ಯ, ಅಭಿಷೇಕ್, ಬೆಳಗುಂಬ ವಿಜಯಕುಮಾರ್, ಆನಂದ್ ಗೌಡ, ಹರಿಪ್ರಸಾದ್, ಲೋಹಿತ್, ರೂಪೇಶ್ ಕುಮಾರ್, ವಿಜಯಕುಮಾರ್, ಟಿ.ಕೆ.ರಾಮು, ಸೂರ್ಯಕುಮಾರ್, ಶಿವರಾಜು, ಲೋಕೇಶ್, ಸೋಮಶೇಖರ್, ರಾಮು, ಸಿ. ಕೆ.ಸುಧೀಂದ್ರ, ಎಚ್. ಆರ್. ಮಾದೇಶ್, ನರಸಿಂಹಮೂರ್ತಿ ಮತ್ತಿತರರು ವಿಜೇತರಿಗೆ ಬಹುಮಾನ ವಿತರಿಸಿದರು.

(Visited 1 times, 1 visits today)