ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಸಿಂಡಿಕೇಟ್ ಸದಸ್ಯ ಪ್ರೊ. ಕೆ. ಜಿ. ಪರಶುರಾಮ ಅವರು ಸಂತಶ್ರೇಷ್ಠ ಕನಕದಾಸ ಜಯಂತಿಯ ಗೌರವ ಸನ್ಮಾನಕ್ಕೆ ಭಾಜನರಾಗಿದ್ದಾರೆ.
ತುಮಕೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತುಮಕೂರು ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಸಾಹಿತ್ಯ ಪರಿಷತ್ ಪ್ರೊ. ಪರಶುರಾಮ ಅವರಿಗೆ ಈ ಪುರಸ್ಕಾರ ನೀಡಿ ಗೌರವಿಸಿವೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತುಮಕೂರು ವಿಶ್ವವಿದ್ಯಾನಿಲಯವು ವಿಶೇಷ ಘಟಕ ಯೋಜನೆಯಡಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ’ದಲ್ಲಿ ಈ ಗೌರವ ಪ್ರದಾನ ಮಾಡಲಾಯಿತು.
ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ನಿವೃತ್ತ ನ್ಯಾಯಾಧೀಶ ಬಾಬಾ ಸಾಹೇಬ್ ಜಿನರಾಳ್ಕರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಮಿರ್ಜಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪ್ರೊ. ಪರಶುರಾಮ ಅವರು 24 ವರ್ಷಗಳ ಬೋಧನೆ ಹಾಗೂ ಸಂಶೋಧನೆ ಅನುಭವವನ್ನು ಹೊಂದಿದ್ದು ಪ್ರಸ್ತುತ ಭಾರತೀಯ ಸಮಾಜಕಾರ್ಯ ವೃತ್ತಿಪರರ ಸಂಘದ ಉಪಾಧ್ಯಕ್ಷರಾಗಿದ್ದಾರೆ. ಎಂಟು ಕೃತಿಗಳನ್ನು ಹಾಗೂ 130 ಸಂಶೋಧನ ಪ್ರಬಂಧಗಳನ್ನು ರಾಷ್ಟಿçÃಯ ಹಾಗೂ ಅಂತಾರಾಷ್ಟಿçÃಯ ನಿಯತಕಾಲಿಕಗಳಲ್ಲಿ ಪ್ರಕಟಿಸಿದ್ದಾರೆ. 120ಕ್ಕೂ ಹೆಚ್ಚು ಪ್ರಬಂಧಗಳನ್ನು ಸಮ್ಮೇಳನಗಳಲ್ಲಿ ಮಂಡಿಸಿದ್ದಾರೆ.
ಮಾಳವೀಯ ಮಿಶನ್ ಅಧ್ಯಾಪಕ ತರಬೇತಿ ಕೇಂದ್ರದ ಶೈಕ್ಷಣಿಕ ಸಲಹೆಗಾರರಾಗಿ ಯುಜಿಸಿಯಿಂದ ನಾಮನಿರ್ದೇಶಿತರಾಗಿದ್ದಾರೆ. ಭಾರತೀಯ ರೆಡ್‌ಕ್ರಾಸ್ ಸಂಘದ ಕರ್ನಾಟಕ ಶಾಖೆಯ ಗೌರವ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರೊ. ಪರಶುರಾಮ ಅವರು ಈಗಾಗಲೇ ಡಾ. ಅಬ್ದುಲ್ ಕಲಾಂ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ, ನೇಷನ್ ಬಿಲ್ಡರ್ ಪ್ರಶಸ್ತಿ, ಸಮಾಜ ಸೇವಾ ಭೂಷಣ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಒಟ್ಟಾರೆ ಶೈಕ್ಷಣಿಕ ಸಾಧನೆಯನ್ನು ಪರಿಗಣಿಸಿ ಕನಕದಾಸ ಜಯಂತಿಯ ಗೌರವ ಸನ್ಮಾನವನ್ನು ನೀಡಲಾಗಿದೆ.
(Visited 1 times, 1 visits today)