ತುಮಕೂರು: ಕಳೆದ ಎಂಟು ದಿನಗಳಿಂದ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಅಡಳಿತ ಅಧಿಕಾರಿಗಳ ಸಂಘ, ಕೇಂದ್ರ ಸಮಿತಿಯ ನಿರ್ದೇಶಕನದ ಮೇರೆಗೆ ಮುಷ್ಕರ ಕೈಗೊಂಡಿದ್ದರೂ ಸರಕಾರ ಇದುವರೆಗೂ ನಮ್ಮ ಬೇಡಿಕೆಗಳ ಈಡೇರಿಸಲು ಗಮನಹರಿಸಿರುವುದಿಲ್ಲ ಎಂದು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಎಸ್‌ಚಿ.ದೇವರಾಜು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಕಳೆದ ಎಂಟು ದಿನಗಳಲ್ಲಿ ಮೂಲಭೂತ ಸೌಕರ್ಯ, ಬಡ್ತಿ, ಅಂತರ ಜಿಲ್ಲಾ ವರ್ಗಾವಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುತಿದ್ದೇವೆ. ಆದರೆ ಸರಕಾರದ ಪ್ರತಿನಿಧಿಗಳಿಂದ ಇದುವರೆಗೂ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ.ಹಾಗಾಗಿ ಮುಷ್ಕರವನ್ನು ಮುಂದುವರೆಸುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ನಾವು ಸರಕಾರಕ್ಕೆ ಹೊರೆಯಾಗುವಂತಹ ಯಾವ ಬೇಡಿಕೆಗಳನ್ನು ಮುಂದಿಟ್ಟಿಲ್ಲ.ಬದಲಾಗಿ, ನಮ್ಮ ಮೇಲಿರುವ ಹೊರೆಯನ್ನು ಇಳಿಸಿ ಎಂದು ಕೇಳುತಿದ್ದೇವೆ ಎಂದರು.
ಸರಕಾರದ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು, ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಮಿತಿಯ ಸದಸ್ಯರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದರೂ, ಬೇಡಿಕೆಗಳ ಈಡೇರಿಕೆಯ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸಿಲ್ಲ. ನಮಗೂ ಸಹ ಮುಷ್ಕರದ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಲು ಇಷ್ಟವಿಲ್ಲ.ಆದರೆ ನಮ್ಮ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗದೆ ಕೆಲಸ ಮಾಡುವುದು ಕಷ್ಟವಾಗಿದೆ.ಗ್ರಾಮ ಆಡಳಿತ ಆಧಿಕಾರಿಗಳ ಹುದ್ದೆಗೆ ಶ್ರೀಮಂತರು ಬರುವುದಿಲ್ಲ. ಮನೆಯ ಸ್ಥಿತಿಗತಿ ನೋಡಿ, ಓದುವ ಹಂಬಲವಿದ್ದರೂ ಕೆಲಸ ಅನಿವಾರ್ಯವಾದ ಕಾರಣ ಬರುತ್ತೇವೆ. ನಮಗೂ ಮನೆ, ಕುಟುಂಬ, ಮಕ್ಕಳ ಶಿಕ್ಷಣ, ಮನೆ ಬಾಡಿಗೆ ಇಂತಹ ಅನೇಕ ಸಮಸ್ಯೆಗಳಿವೆ.ಹಾಗಾಗಿ ಸರಕಾರ ಕೂಡಲೇ ನಮ್ಮ ಬೇಡಿಕೆಗಳ ಕಡೆಗೆ ಗಮನಹರಿಸಿ, ಬಗೆಹರಿಸಲು ಪ್ರಯತ್ನಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಮುಷ್ಕರದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಎಸ್.ದೇವರಾಜು, ತಾಲೂಕು ಅಧ್ಯಕ್ಷ ಕಲ್ಲೇಶ್,ಉಪಾಧ್ಯಕ್ಷ ದೇವರಾಜು, ಚಂದ್ರಕಲ, ರವಿಕುಮಾರ್, ಅನಿಲ್ ಕ್ರಿಸ್ಟೋಪರ್, ಶ್ರೀನಿವಾಸ್, ಮಂಜುನಾಥ್, ಸೂರಜ್, ದಿವ್ಯ, ಸಹನ, ಬಿಂದ್ರುಶ್ರೀ ಇದ್ದರು.
(Visited 1 times, 1 visits today)