ಹುಳಿಯಾರು: ಹುಳಿಯಾರು ಹೋಬಳಿಯ ಕಂಪನಹಳ್ಳಿ ವ್ಯಾಪ್ತಿಯಲ್ಲಿರುವ ತೋಟದ ಮನೆಗಳಿಗೆ ಕಳೆದ ಹದಿನೈದಿಪ್ಪತ್ತು ದಿನಗಳಿಂದ ಹಗಲುರಾತ್ರಿ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆಯಾಗದೆ ನಿವಾಸಿಗಳಿಗೆ ತೊಂದರೆಯಾಗಿದ್ದು ರಾತ್ರಿ ವೇಳೆಯಾದರೂ ಸಿಂಗಲ್ ಫೇಸ್ ವಿದ್ಯುತ್ ಕೊಡಿ ಎಂದು ಇಲ್ಲಿನ ನಿವಾಸಿಗಳು ಸೋಮವಾರ ಬೆಸ್ಕಾಂ ಎಸ್‌ಒ ರಘುರಾಮ್ ಅವರಿಗೆ ಮನವಿ ಮಾಡಿದರು. ಕಂಪನಹಳ್ಳಿ ಸುತ್ತಮತ್ತಲಿನಲ್ಲಿ ಹದಿನೈದಿಪ್ಪತ್ತು ರೈತರು ಕುಟುಂಬ ಹಾಗೂ ಜಾನುವಾರುಗಳೊಂದಿಗೆ ಜಮೀನು ಗಳಲ್ಲೇ ನಿರ್ಮಿಸಿರುವ ಮನೆಗಳಲ್ಲಿ ವಾಸವಾಗಿದ್ದಾರೆ. ಜಮೀನಿನಲ್ಲಿರುವ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಇದೆ. ಇವುಗಳಿಗೆ ದಿನದಲ್ಲಿ ಹಗಲಿನಲ್ಲಿ ಮಧ್ಯಾಹ್ನ, ರಾತ್ರಿ ವೇಳೆಯಲ್ಲಿ ಮಧ್ಯರಾತ್ರಿ ಮೂರು ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ಉಳಿದ ಸಮಯದಲ್ಲಿ ವಿದ್ಯುತ್ ಇರುವುದಿಲ್ಲ ಎಂದರು. ರೈತರ ತೋಟದ ಮನೆಗಳಿಗೆ ಪಂಪ್‌ಸೆಟ್‌ಗಳಿಗೆ ಪೂರೈಕೆಯಾಗುವಾಗ ಮಾತ್ರ ವಿದ್ಯುತ್ ಲಭ್ಯವಿರುತ್ತದೆ. ಉಳಿದ ಸಮಯದಲ್ಲಿ ಇರುವುದಿಲ್ಲ. ಇದರಿಂದ ರಾತ್ರಿ ಸಮಯದಲ್ಲಿ ಗೃಹಿಣಿಯರ ಅಡುಗೆ, ಮಕ್ಕಳ ವಿದ್ಯಾಬ್ಯಾಸಕ್ಕೆ ಭಾರಿ ತೊಂದರೆಯಾಗಿದೆ ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಓದುತ್ತಿರುವ ಇಪ್ಪತ್ತಕ್ಕೂ ಹೆಚ್ಚು ಮಕ್ಕಳಿದ್ದಾರೆ. ಈಗ ಪರೀಕ್ಷೆ ಸಮಯವಾಗಿರುವುದರಿಂದ ರಾತ್ರಿ ವೇಳೆ ಕರೆಂಟ್ ಇಲ್ಲದೆ ಓದಿಕೊಳ್ಳಲು ತೀವ್ರ ತೊಂದರೆಯಾಗುತ್ತಿದೆ. ಈ ಭಾಗದಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು ರಾತ್ರಿ ವೇಳೆ ದನಕರು, ನಾಯಿಗಳನ್ನು ತಿಂದೋಗುತ್ತಿದೆ. ಪರಿಣಾಮ ವಿದ್ಯುತ್ ಇಲ್ಲದಿರುವುದರಿಂದ ರಾತ್ರಿ ವೇಳೆ ಮನೆಯಿಂದ ಹೊರಬರಲಾಗದೆ ಭಯದಿಂದ ಮಲಗುವಂತಾಗಿದೆ. ಜೊತೆಗೆ ದನಕರುಗಗಳನ್ನು ಚಿರತೆಯಿಂದ ರಕ್ಷಿಸಿಕೊಳ್ಳುವುದು ಸವಾಲಾಗಿದೆ. ಹಾಗಾಗಿ ಈ ಹಿಂದೆ ನೀಡುತ್ತಿದ್ದಂತೆ ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ನಿರಂತರ ವಿದ್ಯುತ್ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಇದಕ್ಕೆ ಬೆಸ್ಕಾಂ ಶಾಖಾಧಿಕಾರಿ ರಘುರಾಮ್ ಮಾತನಾಡಿ ಇದು ಹುಳಿಯಾರು ಸಮಸ್ಯೆಯೊಂದೆ ಅಲ್ಲ ಇಡೀ ರಾಜ್ಯದಲ್ಲೇ ಈ ರೀತಿ ತೊಂದರೆಯಾಗಿದೆ. ಹಬ್ಬ, ಜಾತ್ರೆಯ ಸಮಯದಲ್ಲಾದರೂ ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್ ಕೊಡಿ ಎಂದು ಈ ಭಾಗದ ಜನರು ಮನವಿ ಮಾಡಿದ್ದರೂ ಕೊಡಲಾಗುತ್ತಿಲ್ಲ. ಲಿಖಿತವಾಗಿ ಮನವಿ ಕೊಟ್ಟರೆ ಮೇಲಧಿಕಾರಿಗಳಿಗೆ ಕಳುಹಿಸಿ ನಾನೂ ಕೂಡ ರಾತ್ರಿ ವೇಳೆ ತೋಟದ ಮನೆಗಳಿಗೆ ವಿದ್ಯುತ್ ಕೊಡಲು ಮನವಿ ಮಾಡುತ್ತೇನೆ ಎಂದೇಳಿ ಕಳುಹಿಸಿದರು.
ಬಸವರಾಜು, ಚಂದ್ರಣ್ಣ, ಕುಮಾರಣ್ಣ, ರಾಜು, ನಟರಾಜು, ವಿನಯ್, ಪ್ರಸನ್ನ, ಚನ್ನಬಸವಯ್ಯ, ಇದ್ದರು.
(Visited 1 times, 1 visits today)