ಹುಳಿಯಾರು: ಉತ್ತಮ ಆರೋಗ್ಯವಿದ್ದರೆ ಮಾತ್ರ ಕಲಿಕೆಗೆ ಸಹಕಾರಿಯಾಗುತ್ತದೆ. ಮಕ್ಕಳು ಕಲಿಕೆಯ ಜೊತೆಗೆ ಆರೋಗ್ಯದ ಕಡೆಗೂ ಗಮನ ಹರಿಸಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ತಿಳಿಸಿದರು.
ಹುಳಿಯಾರು ಹೋಬಳಿಯ ಚಿಕ್ಕಬಿದರೆ ಶ್ರೀ ಮಾರುತಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಕಲಿಕೆ ಮತ್ತು ಆರೋಗ್ಯ ವಿಷಯದ ಕುರಿತು ಅವರು ಮಾತನಾಡಿದರು.
ಉತ್ತಮ ಆರೋಗ್ಯಕ್ಕೆ ನೀರು ಅತ್ಯಗತ್ಯವಾಗಿದೆ. ಹೆಚ್ಚಾಗಿ ನೀರು ಕುಡಿಯಿರಿ, ಮಳೆಗಾಲದಲ್ಲಿ ಮಳೆ ನೀರು ಕುಡಿಯಿರಿ, ನಮ್ಮ ಭಾಗದ ಪ್ರಮುಖ ಹಣ್ಣುಗಳಾದ ಮಾವು, ಹಲಸು, ಸೀಬೆ ಹಣ್ಣನ್ನು ಹೆಚ್ಚಾಗಿ ಬಳಸಿ, ಮನೆಯ ಮುಂದೆ ಪಪ್ಪಾಯಿ, ನುಗ್ಗೆ, ಬಳ್ಳಿತರಕಾರಿಗಳನ್ನು ಬೆಳೆದು ಬಳಸುವುದನ್ನು ವೃಢಿಸಿಕೊಳ್ಳಿ. ಸಿರಿ ಧಾನ್ಯಗಳನ್ನು ಹೆಚ್ಚಾಗಿ ಬಳಸಿ ಆರೋಗ್ಯದಿಂದಿರಿ ಎಂದು ಸಲಹೆ ನೀಡಿದರು.
ಶಿಕ್ಷಣ ಎಂದರೆ ಶಿಕ್ಷೆಯಲ್ಲ. ಆದರೂ ಶಿಕ್ಷೆ ಕೊಟ್ಟೆ ಕಲಿಸುವುದು ಅನಿವಾರ್ಯವಾಗಿದೆ. ವಿದ್ಯಾರ್ಥಿ ಜೀವನ ಎಂದರೆ ವಿದ್ಯೆ ಕಲಿಯುವುದಷ್ಟೆ. ಆದರೂ ದಮ್ಮಯ್ಯ ದಪ್ಪಯ್ಯ ಕಲಿರಪ್ಪ ಅನ್ನಬೇಕಿದೆ. ಕಲಿಕೆ ಎಂದರೆ ಸರ್ವಾಂಗೀಣ ಬೆಳವಣಿಗೆ ಪೂರವಾಗಿರಬೇಕು. ಆದರೂ ಆಟ, ಹಾಡು, ಡ್ಯಾನ್ಸ್, ಡ್ರಾಯಿಂಗ್, ನಾಟಕಕ್ಕೆ ಬಲವಂತ ಮಾಡಿ ಸೇರಿಸಿಕೊಳ್ಳಬೇಕಿದೆ ಎಂದು ಇಂದಿನ ಶಿಕ್ಷಣದ ಪರಿಸ್ಥಿತಿಯನ್ನು ವಿವರಿಸಿದರು. ಜ್ಞಾನ ಸಂಪಾದನೆಯಿAದ ಮಾತ್ರ ಧೈರ್ಯ ಬರಲು ಸಾಧ್ಯ. ಹಾಗಾಗಿ ಪಠ್ಯಕ್ಕೆ ಮಾತ್ರ ಸೀಮಿತವಾಗದೆ ಜ್ಞಾನ ವಿಕಾಸಕ್ಕೆ ಸಹಕಾರಿಯಾಗುವ ದಿನಪತ್ರಿಕೆಗಳನ್ನು ಓದಿ, ಸಾಹಿತ್ಯ ಪುಸ್ತಕಗಳನ್ನು ಓದಿ, ಒಳ್ಳೆಯ ಚಲನಚಿತ್ರಗಳನ್ನು ನೋಡಿ. ಶಾಲೆಯ ಸಭೆ ಸಮಾರಂಭಗಳಲ್ಲಿ ಗಣ್ಯರ ಮಾತುಗಳನ್ನು ಆಲಿಸಿರಿ ಮಾತೃ ಭಾಷೆ ಕನ್ನಡದೊಂದಿಗೆ, ಇಂಗ್ಲೀಷ್, ಹಿಂದಿ ಸೇರಿದಂತೆ ಕಲಿಯಲು ನಿಮಗೆಷ್ಟು ಸಾಧ್ಯವೋ ಅಷ್ಟು ಭಾಷೆಗಳನ್ನು ಕಲಿಯಿರಿ ಎಂದು ಕಿವಿ ಮಾತು ಹೇಳಿದರು. ಮಾರುತಿ ಗ್ರಾಮಾಂತರ ಪ್ರೌಢಶಾಲೆ ಕಾರ್ಯದರ್ಶಿ ಸಿ.ಪ್ರದೀಪ್, ಆಯುರ್ವೇದ ವ್ಯದ್ಯರಾದ ಡಾ.ಬಸವರಾಜಪಂಡಿತ್, ಶಿಕ್ಷಕರುಗಳಾದ ಉದಯ ಕೃಷ್ಣ, ಶೋಭಾ, ಧರಣೇಶ್, ಮಂಜುನಾಥ್, ನಿಕಿತಾ, ರೇಖಾ ಇದ್ದರು.
(Visited 1 times, 1 visits today)