ತುಮಕೂರು: ನಾಡಿನ ಜನರ ಅಭಿಮಾನ ಸಂಪಾದಿಸಿರುವ ಡಾ.ರಾಜಕುಮಾರ್ ಅವರ ಕುಟುಂಬ ಸಾಕಷ್ಟು ಸಾಮಾಜಿಕ ಸೇವೆಯಲ್ಲಿ ತೊಡಗಿರುವುದು ಶ್ರೇಷ್ಠ ಕಾರ್ಯ. ಪುನೀತ್ ರಾಜಕುಮಾರ್ ಅವರ ಹೆಸರಲ್ಲಿ ಸಮಾಜ ಸೇವೆ ಮುಂದುವರೆದಿರುವುದು ಶ್ಲಾಘನೀಯ ಎಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ನಗರದ ಸಿದ್ಧಗಂಗಾ ಮಠದಲ್ಲಿ ಡಾ. ಪುನೀತ್ ರಾಜಕುಮಾರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಶ್ರೀಮಠದ ಶಾಲಾ ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರಿಗೆ ಉಚಿತ ನೇತ್ರ ತಪಾಸಣೆ ಮತ್ತು ಕನ್ನಡಕ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಶ್ರೀಮಠದಲ್ಲಿರುವ ಎಲ್ಲ ಮಕ್ಕಳಿಗೂ ಕಣ್ಣಿನ ತಪಾಸಣೆ ಹಾಗೂ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಕನ್ನಡಕ ಕೊಡಿಸುವ ಕೆಲಸವನ್ನು ಪ್ರತಿ ವರ್ಷ ಪುನೀತ್ ರಾಜ್‌ಕುಮಾರ್ ಟ್ರಸ್ಟ್ ವತಿಯಿಂದ ಮಾಡಲಾಗುತ್ತಿದೆ ಎಂದರು. ಶ್ರೀಮಠದಲ್ಲಿ ಈಗಾಗಲೇ ಡಾ.ರಾಜ್ ಕುಮಾರ್ ಚಾರಿಟಬಲ್ ಟ್ರಸ್ಟ್ ಮೂಲಕ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಇದರೊಂದಿಗೆ ಈಗ ಡಾ. ಪುನೀತ್‌ರಾಜ್ ಕುಮಾರ್ ಚಾರಿಟಬಲ್ ಟ್ರಸ್ಟ್ ಉದ್ಘಾಟನೆಗೊಂಡಿರುವುದು ಸಂತಸ ತಂದಿದೆ ಎಂದ ಅವರು, ಶಂಕರ್ ಕಣ್ಣಿನ ಆಸ್ಪತ್ರೆ, ಟೈಟಾನ್ ಸಂಸ್ಥೆ ಹಾಗೂ ಟ್ರಸ್ಟ್ ವತಿಯಿಂದ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಮಠದ ಮಕ್ಕಳು ಮತ್ತು ಸಿಬ್ಬಂದಿಗಳಿಗೆ ಉಚಿತ ನೇತ್ರ ತಪಾಸಣೆ ನಡೆಸಿ 800 ಮಕ್ಕಳಿಗೆ ಕನ್ನಡ ವಿತರಣೆ ಮಾಡಲಾಗಿದೆ ಎಂದು ಹೇಳಿದರು. ಮೊಬೈಲ್ ಬಳಸುತ್ತಿರುವ ಕಾರಣದಿಂದ ಕಣ್ಣಿನ ಸಮಸ್ಯೆಗೆ ತುತ್ತಾಗುತ್ತಿರುವ ಪ್ರಕರಣ ಜಾಸ್ತಿಯಾಗುತ್ತಿದೆ. ಮಕ್ಕಳು ಕಣ್ಣಿನ ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡುವ ಅಗತ್ಯವಿದೆ. ಅವಶ್ಯಕತೆ ಇರುವಷ್ಟು ಮಾತ್ರ ಮೊಬೈಲ್ ಬಳಸಿಕೊಳ್ಳಬೇಕು ಎಂದು ಶ್ರೀಗಳು ಸಲಹೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಹಿರಿಯರಿಂದ ಕಿರಿಯರವರೆಗೂ ಕಣ್ಣಿನ ಸಮಸ್ಯೆಗಳು ಕಂಡು ಬರುತ್ತಿದ್ದು, ಮೊಬೈಲ್ ಮತ್ತು ಟಿ.ವಿ ಉಪಕರಣಗಳನ್ನು ಅಗತ್ಯಕ್ಕೆ ತಕ್ಕಂತೆ ಉಪಯೋಗಿಸುವ ಮೂಲಕ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್, ಹಿರಿಯ ನಟ ದೊಡ್ಡಣ್ಣ, ಪಿ. ವಾಸನ್, ಕರ್ನಲ್ ಗುರುಪ್ರಸಾದ್, ಸಿದ್ಧಗಂಗಾ ಆಸ್ಪತ್ರೆಯ ನಿರ್ದೇಶಕ ಡಾ. ಪರಮೇಶ್, ಡಾ.ರವಿಂದ್ರ ನಾಯಕ, ಗೋಣಿ ಬಗೀರಪ್ಪ, ಪ್ರೊ. ಜಿ.ಎಸ್. ರೇಣುಕಪ್ಪ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)