ತುಮಕೂರು: ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಅಂಗವಿಕಲ ಪ್ರತ್ಯೇಕ ಸಚಿವಾಲಯ, ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದ್ಯತೆ ನೀಡಬೇಕು ಹಾಗೂ 2025- 26ನೇ ಸಾಲಿನ ಬಜೆಟ್‌ನಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಜಿಲ್ಲಾ ಅಂಗವಿಕಲರ ಕಲ್ಯಾಣ ವೇದಿಕೆ ಒತ್ತಾಯಿಸಿದೆ. ಅಂಗವಿಕಲರ ಕಲ್ಯಾಣ ಇಲಾಖೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬೇರ್ಪಡಿಸಬೇಕು, ಅಂಗವಿಕಲರಿಗೆ ಮೀಸಲಿಟ್ಟ ಶೇ.5 ರ ಅನುದಾನ ಸಮರ್ಪಕವಾಗಿ ಬಳಸಬೇಕು, ಅಂಗವಿಕಲರ ಕುಂದುಕೊರತೆ ಸಭೆಯು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಬೇಕು ಎಂದು ವೇದಿಕೆ ಅಧ್ಯಕ್ಷ ಸಿ.ಗಂಗರಾಜು ಪ್ರಧಾನ ಕಾರ್ಯದರ್ಶಿ ಇನಾಯಿತ್ ಖಾನ್ ಒತ್ತಾಯಿಸಿದ್ದಾರೆ. ಸ್ವಯಂ ಉದ್ಯೋಗ ದೊರಕಿಸುವ ಆಧಾರ್ ಯೋಜನೆಯ ಸಹಾಯಧನವನ್ನು 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಬೇಕು, ಮಾಸಾಶನ ಹೆಚ್ಚಳ ಮಾಡಬೇಕು, ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ ಸಂಸ್ಥೆ ಪ್ರಾರಂಭಿಸಬೇಕು, ಅಂಗವಿಕಲರು ತಯಾರಿಸಿದ ಉತ್ಪನ್ನ ಮಾರಾಟಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು, ಅಂಗವಿಕಲರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಹಾಗೂ ಕೆಎಸ್‌ಆರ್‌ಟಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಬೇಕು ಎಂದು ಅವರು ಸಚಿವರುಗಳಾದ ಡಾ. ಜಿ. ಪರಮೇಶ್ವರ್ ಹಾಗೂ ಕೆ.ಎನ್. ರಾಜಣ್ಣ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಕೋರಿದ್ದಾರೆ.

(Visited 1 times, 1 visits today)