ತುರುವೇಕೆರೆ: ತಾಲೂಕಿನ ಶೆಟ್ಟಿಗೊಂಡನಹಳ್ಳಿಯಲ್ಲಿ ಸ್ಥಾಪಿತವಾಗಿರುವ ರಾಜ್ಯದ ಪ್ರತಿಷ್ಠಿತ ಹಳ್ಳಿಕಾರ್ ಮಠದ ಸರ್ವತೋಮುಖ ಅಭಿವೃದ್ಧಿಗೆ ತಾವು ಕಂಕಣಬದ್ದವಾಗಿರುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ತಾಲೂಕಿನ ಶೆಟ್ಟಿಗೊಂಡನಹಳ್ಳಿಯಲ್ಲಿ ಶ್ರೀ ಹಳ್ಳಿಕಾರ್ ಮಠ ಟ್ರಸ್ಟ್ ವತಿಯಿಂದ ನಡೆದ ಶ್ರೀ ಹಳ್ಳಿಕಾರ್ ಮಠ ಹಾಗೂ ಶ್ರೀ ಕೃಷ್ಣ ದೇವಾಲಯದ ದ್ವಿತೀಯ ವಾರ್ಷಿಕೋತ್ಸವ ಹಾಗೂ ಅಲ್ಲಿನ ಮಠದ ಸ್ವಾಮೀಜಿಗಳಾದ ಶ್ರೀ ಬಾಲಕೃಷ್ಣಾನಂದ ಸ್ವಾಮೀಜಿಯವರ ದ್ವಿತೀಯ ಪಟ್ಟಾಭಿಷೇಕ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು ರಾಜ್ಯದಾದ್ಯಂತ ಹಳ್ಳಿಕಾರ್ ಸಮುದಾಯವಿದೆ. ಆದರೆ ನಮ್ಮ ತಾಲೂಕಿನಲ್ಲೇ ರಾಜ್ಯದ ಮೊದಲ ಹಳ್ಳಿಕಾರ್ ಮಠ ಸ್ಥಾಪನೆ ಮಾಡಿರುವುದು ಹೆಮ್ಮೆಯ ಸಂಗತಿ. ಈ ಸಮುದಾಯ ಕಳೆದ ಮೂವತ್ತು ವರ್ಷಗಳಿಂದಲೂ ತಮ್ಮ ಬೆಂಬಲಕ್ಕೆ ನಿಂತಿದೆ. ಅದನ್ನು ಮರೆಯಲು ಸಾಧ್ಯವಿಲ್ಲ. ಈಗಾಗಲೇ ತಾವು ಮಠದ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ. ಮುಂಬರುವ ದಿನಗಳಲ್ಲೂ ಮಠದ ಸರ್ವತೋಮುಖ ಅಭಿವೃದ್ದಿಗಾಗಿ 25 ಲಕ್ಷ ರೂಗಳ ಅನುದಾನವನ್ನು ನೀಡುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ಭರವಸೆ ನೀಡಿದರು.
ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ್ ಹಾಲಪ್ಪ ಮಾತನಾಡಿ, ಒಕ್ಕಲಿಗರು ಕುಂಚಿಟಿಗರು ಹಳ್ಳಿಕಾರರು ಸೇರಿದಂತೆ ಹಲವು ಪಂಗಡಗಳು ಒಂದಾಗಬೇಕು. ಅಭಿವೃದ್ಧಿಯ ಮುಖೇನ ಸಮಾಜಗಳು ಮಠಮಾನ್ಯಗಳ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು ಎಂದು ತಿಳಿಸಿದರು.
ವಿಶ್ವ ಒಕ್ಕಲಿಗರ ಮಠದ ಪೀಠಾಧಿಪತಿಗಳಾದ ಸ್ವಾಮಿ ನಿಶ್ಚಲಾನಂದ ಶ್ರೀಗಳು ಮಾತನಾಡಿ, ಪೂರ್ವಾಶ್ರಮದಲ್ಲಿ ಅಧಿಕಾರಿಯಾಗಿದ್ದಾಗ ಕೆ ಆರ್ ಪೇಟೆ, ಅರಕಲಗೂಡು ಹಾಸನ ಭಾಗದಲ್ಲಿ ಹಳ್ಳಿಕಾರರ ಬಗ್ಗೆ ಕೇಳಿದ್ದೆ. ಈಗ ಸ್ವತಃ ಇಲ್ಲಿಗೆ ಬಂದಾಗ ಮಠವನ್ನು ಕಂಡು ಮೂಕವಿಸ್ಮಿತನಾದೆ. ಕೇವಲ ಎರಡೇ ವರ್ಷದಲ್ಲಿ ಇಂತಹ ಶಿಕ್ಷಣ ಸಂಸ್ಥೆ, ವಿಭಿನ್ನ ಶೈಲಿಯಲ್ಲಿ ನಿರ್ಮಿಸಿರುವ ಮಠವನ್ನು ನೋಡಿ ಸಂತಸವಾಗಿದೆ ಎಂದರು.
ತಾಯಿ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾರೋ ಹಾಗೆ ಸಮುದಾಯದ ಬಂಧುಗಳು ಈ ಮಠವನ್ನು ಸಂರಕ್ಷಿಸಬೇಕು. ಆಗ ಮಠ ಬೆಳೆದಂತೆಲ್ಲಾ ತಲೆ ತಲೆ ಮಾರಿಗೂ ಮಠ ಸದಾ ರಕ್ಷಣೆಯಾಗಿ ನಿಲ್ಲುತ್ತದೆ ಎಂದು ತಿಳಿಸಿದರು. ನರಸಿಂಹಗಿರಿ ಸುಕ್ಷೇತ್ರದ ಶ್ರೀಗಳಾದ ಹನುಮಂತ ನಾಥ ಸ್ವಾಮೀಜಿಗಳು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ನ ಅಧ್ಯಕ್ಷರಾದ ನಾಗಯ್ಯ ಮಾತನಾಡಿದರು.

(Visited 1 times, 1 visits today)