ತುಮಕೂರು: ಜಿಲ್ಲೆಯಲ್ಲಿ ಇಂದಿನಿAದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, 35 ಪರೀಕ್ಷಾ ಕೇಂದ್ರಗಳಲ್ಲೂ ಪರೀಕ್ಷೆ ಸುಸೂತ್ರವಾಗಿ ನಡೆಯಿತು.
ಜಿಲ್ಲೆಯ ತುಮಕೂರು ಹಾಗೂ ಮಧುಗಿರಿ ಈ ಎರಡು ವಿಭಾಗಗಳಲ್ಲೂ 25768 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಯಾವುದೇ ರೀತಿಯ ಅಡಚಣೆಗಳಿಲ್ಲದೆ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಸುಲಲಿತವಾಗಿ ನಡೆಯಿತು.
ಜಿಲ್ಲೆಯ ತುಮಕೂರು ತಾಲ್ಲೂಕಿನಲ್ಲಿ 13, ಕೊರಟಗೆರೆ ತಾಲ್ಲೂಕಿನಲ್ಲಿ 1, ಗುಬ್ಬಿ, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಮಧುಗಿರಿ ತಾಲ್ಲೂಕಿನಲ್ಲಿ ತಲಾ 2, ಕುಣಿಗಲ್, ತಿಪಟೂರು, ಪಾವಗಡ ತಾಲ್ಲೂಕಿನಲ್ಲಿ ತಲಾ 3, ಸಿರಾ ತಾಲ್ಲೂಕಿನಲ್ಲಿ 4 ಸೇರಿ ಒಟ್ಟು 35 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ನಕಲು, ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
ನಗರದಲ್ಲಿರುವ ಪರೀಕ್ಷಾ ಕೇಂದ್ರಗಳಾದ ಸರ್ಕಾರಿ ಜೂನಿಯರ್ ಕಾಲೇಜು, ಎಂಪ್ರೆಸ್ ಕಾಲೇಜು, ಸಿದ್ದಗಂಗಾ ಮಹಿಳಾ ಪದವಿ ಪೂರ್ವ ಕಾಲೇಜು, ಕಾಳಿದಾಸ ಪ.ಪೂ. ಕಾಲೇಜು ಸೇರಿದಂತೆ ಜಿಲ್ಲೆಯಾದ್ಯಂತ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಪೋಷಕರೊಂದಿಗೆ ಬೆಳಿಗ್ಗೆ 8 ಗಂಟೆಗೆ ಆಗಮಿಸಿ ತಮ್ಮ ನೋಂದಣಿ ಸಂಖ್ಯೆ ಇರುವ ಕೊಠಡಿಗಳ ನಂಬರ್‌ಗಾಗಿ ಮುಗಿ ಬಿದ್ದಿದ್ದ ದೃಶ್ಯಗಳು ಕಂಡು ಬಂದವು.
ಡಿಸಿ-ಎಸ್ಪಿ ಪರಿಶೀಲನೆ; ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳಾದ ಸರ್ಕಾರಿ ಜೂನಿಯರ್ ಕಾಲೇಜು ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರೀಕ್ಷಾ ಕೊಠಡಿಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಕೊಠಡಿಯಲ್ಲಿ ಬೆಳಕಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 24,378 ಹೊಸ ವಿದ್ಯಾರ್ಥಿಗಳು, 318 ಪುನರಾವರ್ತಿತ, 1067 ಖಾಸಗಿ ಹಾಗೂ 5 ಫಲಿತಾಂಶ ಸುಧಾರಣೆ ವಿದ್ಯಾರ್ಥಿಗಳು ಸೇರಿ ಒಟ್ಟು 25,768 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಾಯಿಸಿಕೊAಡಿದ್ದು, ಈ ಪೈಕಿ 9088 ವಿಜ್ಞಾನ, 10217 ವಾಣಿಜ್ಯ ಹಾಗೂ 5977 ಕಲಾ ವಿಭಾಗದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಬಾಲಗುರುಮೂರ್ತಿ ತಿಳಿಸಿದ್ದಾರೆ.
(Visited 1 times, 1 visits today)