ತುರುವೇಕೆರೆ: ರಾತ್ರಿ ವೇಳೆ ಮನೆ ಮುಂದೆ ಹಾಕಲಾಗಿದ್ದ ತೆಂಗಿಕಾಯಿ ರಾಶಿಯಲ್ಲಿ ಮಲಗಿದ್ದ ನಾಯಿ ಮೇಲೆ ಚಿರತೆ ದಾಳಿ ನಡೆಸಿ ಹೊತ್ತೊಯ್ದಿರುವ ಘಟನೆ ತಾಲ್ಲೂಕಿನ ತೊರೆಮಾವಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಲ್ಲೂಕಿನ ಆನೇಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತೊರೆಮಾವಿನಹಳ್ಳಿ ಗ್ರಾಮದ ಕಲ್ಲೇಶ್ವರಸ್ವಾಮಿ ದೇವಾಲಯದ ಸಮೀಪವಿರುವ ಶಂಕರಪ್ಪ ಎಂಬುವರ ಮನೆ ಮುಂದೆ ತೆಂಗಿನ ಕಾಯಿ ರಾಶಿ ಹಾಕಲಾಗಿತ್ತು. ಈ ತೆಂಗಿನ ರಾಶಿ ಪಕ್ಕದಲ್ಲೇ ಇವರು ಸಾಕಿದ್ದ ನಾಯಿ ಮಲಗಿತ್ತು. ಮಧ್ಯರಾತ್ರಿ ಇದನ್ನು ಹೊಂಚು ಹಾಕಿರುವ ಚಿರತೆ ನಿಧಾನವಾಗಿ ಸದ್ದುಗದ್ದಲ ಇಲ್ಲದೆ ಮೆಲ್ಲನೆ ಹೋಗಿ ನಾಯಿ ಮೇಲೆ ದಾಳಿ ಮಾಡಿ ಹೊತ್ತುಕೊಂಡು ಹೋಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಗ್ರಾಮದ ಹೃದಯಭಾಗಕ್ಕೆ ಚಿರತೆ ನುಗ್ಗಿ ಮನೆ ಮುಂದೆ ಮಲಗಿದ್ದ ನಾಯಿಯನ್ನು ಹೊತ್ತುಕೊಂಡು ಹೋಗಿರುವುದರಿಂದ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ರಾತ್ರಿ ಮತ್ತು ಹಗಲು ವೇಳೆ ಗ್ರಾಮದ ಹೊರ ಭಾಗದಲ್ಲಿ ಜಮೀನುಗಳು, ತೋಟಗಳಿಗೆ ಹೋಗಲು ರೈತರು ಹಿಂದೇಟು ಹಾಕುವಂತಾಗಿದೆ.
ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ ಈ ಭಾಗದ ಜನರ ನಿದ್ದೆಗೆಡಿಸಿರುವ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

(Visited 1 times, 1 visits today)