ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಈ ಸಲಿನ ಬಜೆಟ್ ಸಂಪೂರ್ಣ ರೈತ ವಿರೋಧಿ, ದಲಿತ ವಿರೋಧಿಜನ ವಿರೋಧಿ ಹಿಂದೂ ವಿರೋಧಿಯಾಗಿದೆ ಎಂದು ಆಪಾದಿಸಿ ಜಿಲ್ಲಾ ಬಿಜೆಪಿ ಮುಖಂಡರು ಸೋಮವಾರ ನಗರ ದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಬಿಜಿಎಸ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಟ್ರಾಕ್ಟರ್ ರ‍್ಯಾಲಿ ನಡೆಸಿದ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾ ಮಯ್ಯ ಮಂಡಿಸಿದ ಬಜೆಟ್ ಮತ ಬ್ಯಾಂಕ್ ರಾಜಕಾರಣಕ್ಕೋಸ್ಕರ ಅಲ್ಪಸಂಖ್ಯಾತರನ್ನು ಓಲೈಸಿರುವ ಹಿಂದೂ ವಿರೋಧಿ ಎಂದು ತಮ್ಮನ್ನು ಸಾಬೀತು ಮಾಡಿಕೊಂಡಿದ್ದಾರೆ. ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಿ ಬಜೆಟ್‌ನಲಿ ರೈತರು, ದಲಿತರು, ಜನಸಾ ಮಾನ್ಯರ ಹಿತವನ್ನು ಧಿಕ್ಕರಿಸಿ ವಂಚಿಸಿದ್ದಾರೆ ಎಂದು ಟೀಕಿಸಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಮೋಸ ಮಾಡಿ, ಅವರು ರಚಿಸಿದ ಸಂವಿಧಾನಕ್ಕೆ ಕಾಂಗ್ರೆಸ್ ನವರು ಅಪಚಾರ ಮಾಡುತ್ತಿದ್ದಾರೆ. ಈ ಬಜೆಟ್‌ನಲ್ಲಿ ದಲಿತರಿಗೆ ಯಾವುದೇ ವಿಶೇಷ ಸೌಲಭ್ಯ ಘೋಷ ಣೆ ಮಾಡದೆ, ದಲಿತರ ಹಣವನ್ನು ಪಂಚ ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವುದು ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ನೀತಿಗೆ ಸಾಕ್ಷಿಯಾಗಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕಾದ ಸರ್ಕಾರ ನಿರ್ಲಕ್ಷö್ಯ ಮಾಡಿದೆ. ದಲಿತರಿಗೆ ನೀಡಬೇಕಾದ ಆದ್ಯತೆ ನೀಡಲ್ಲ, ಹಿಂದೂ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎ. ಆಂಜನಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ಈ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಸವಲತ್ತು ನೀಡಿದೆ, ಆದರೆ ಬಹು ಸಂಖ್ಯೆಯ ದಲಿತ ವರ್ಗಕ್ಕೆ ಅನ್ಯಾಯ ಮಾಡಿದೆ. ಒಂದಲ್ಲಾ ಒಂದು ರೀತಿಯಲ್ಲಿ ಸರ್ಕಾರದಿಂದ ದಲಿತರಿಗೆ ಅನ್ಯಾಯವಾಗುತ್ತಲೇ ಇದೆ.ಎಸ್.ಸಿ, ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಾದ ಹಣವನ್ನುಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ವಂಚಿಸಿದೆ ಎಂದು ಹೇಳಿದರು.
ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ. ವೇದಮೂರ್ತಿ ಮಾತನಾಡಿ, ತಾವು ಅಹಿಂದ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಇದರಲ್ಲಿ ದಲಿತರು, ಹಿಂದುಳಿದವರನ್ನು ಕಡೆಗಣಿಸಿ ಅಲ್ಪಸಂಖ್ಯಾತರನ್ನೇ ಓಲೈಸುತ್ತಿದ್ದಾರೆ. ಅತಿ ಹೆಚ್ಚಿನ ಜನಸಂಖ್ಯೆ ಇರುವ ಹಿಂದುಳಿದ ವರ್ಗಗಳಿಗೆ ಬಜೆಟ್‌ನಲ್ಲಿ ನ್ಯಾಯ ಒದಗಿಸಿಲ್ಲ ಎಂದು ಟೀಕಿಸಿದರು.
ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ, ೧.೩ ಲಕ್ಷ ಕೋಟಿ ಸಾಲ ಮಾಡಿರುವ ಸಿದ್ದರಾಮಯ್ಯ ಸರ್ಕಾರ ಮಂಡಿಸಿರುವ ಬಜೆಟ್ ಸಾಲದ ಬಜೆಟ್, ಈ ಮೂಲಕ ರಾಜ್ಯವನ್ನು ದಿವಾಳಿ ಅಂಚಿಗೆ ತಂದಿದ್ದಾರೆ. ಯಾವುದೇ ಹೊಸ ಯೋಜನೆ ಜಾರಿಗೆ ತರದೆ, ಬಿಜೆಪಿ ಸರ್ಕಾರ ಮಂಜೂರು ಮಾಡಿದ್ದ ೯ ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿದೆ. ಮುಸಲ್ಮಾನರ ೧೬ ಕಾಲೇಜುಗಳನ್ನು ಆರಂಭಿಸಲು ಆಸಕ್ತಿ ವಹಿಸಿದೆ. ಹಿಂದೂಗಳ ಶವಸಂಸ್ಕಾರಕ್ಕೆ ಸ್ಮಶಾನಗಳಿಲ್ಲ, ಆದರೆ ಹಿಂದೂಗಳ ಜಮೀನು ನುಂಗುವ ವಕ್ಫ್, ಖಬರ್‌ಸ್ತಾನ್‌ಗಳಿಗೆ ನೆರವು ನೀಡುತ್ತಿದೆ ಎಂದು ದೂರಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಂಗರಾಜು, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ಧರಾಮಣ್ಣ, ಮುಖಂಡರಾದ ಸಾಗರನಹಳ್ಳಿ ವಿಜಯಕುಮಾರ್, ಹೆಚ್.ಎಂ.ರವೀಶಯ್ಯ, ಧನುಷ್, ಟಿ.ಹೆಚ್. ಹನುಮಂತರಾಜು, ಸತ್ಯಮಂಗಲ ಜಗದೀಶ್, ಸಿ.ಎನ್.ರಮೇಶ್, ವಿಷ್ಣುವರ್ಧನ್, ಪುಟ್ಟರಾಜು, ಮಂಜುನಾಥ್, ಗಣೇಶ್ ಪ್ರಸಾದ್, ಪ್ರೇಮಾ ಹೆಗಡೆ, ಲತಾಬಾಬು, ನಾಗರತ್ನಮ್ಮ, ಗಾಯತ್ರಿ, ವಸಂತ, ಶಿವಕುಮಾರ್, ವೆಂಕಟೇಶಾಚಾರ್, ರಾಜಶೇಖರ್, ಊರ್ಡಿಗೆರೆ ರವಿ, ನಿಸರ್ಗರಮೇಶ್, ಹನುಮಂತರಾಜು ಮೊದಲಾದವರು ಭಾಗವಹಿಸಿದ್ದರು.

(Visited 1 times, 1 visits today)