ಹುಳಿಯಾರು: ಬಡವರಿಗೆ ಗಂಭೀರ ಕಾಯಿಲೆಗಳಾದಾಗ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಪುನಃ ಯಶಸ್ವಿನಿ ಯೋಜನೆ ಜಾರಿಗೆ ತಂದಿದೆ. ಆದರೆ ಜನರಿಗೆ ಅನುಕೂಲವಾಗುವ ಈ ಯೋಜನೆಯ ನೊಂದಣಿಗೆ ಕ್ಷಿಣಿಸಿದೆ. ಸಿಬ್ಬಂದಿಗಳ ಮೂಲಕ ಅರಿವು ಮೂಡಿಸಿ ಯಶಸ್ವಿನಿ ನೊಂದಣಿ ಪ್ರಗತಿ ಶೇ.೧೦೦ ರಷ್ಟು ಸಾಧಿಸುವಂತೆ ಹುಳಿಯಾರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಡ್ಡಿಪುಟ್ಟಣ್ಣ ಅವರು ಸಿಇಒ ಶಿವಣ್ಣ ಅವರಿಗೆ ಸೂಚನೆ ನೀಡಿದರು.
ಹುಳಿಯಾರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೋಮವಾರ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶೇರುದಾರರಾಗಿರುವ ಎಸ್‌ಸಿಎಸ್‌ಟಿ ಸಮುದಾಯದವರಿಗೆ ಉಚಿತ ವಾಗಿ ಯಶಸ್ವಿನಿ ಯೋಜನೆಗೆ ನೊಂದಾ ಣಿ ಮಾಡಬಹುದಾಗಿದೆ. ಆದರೆ ಅರಿವಿನ ಕೊರತೆ ಯಿಂದಾಗಿ ಇದೂವರೆವಿಗೂ ಬಹಳಷ್ಟು ಮಂದಿ ನೊಂದಣಿ ಮಾಡಿಸಿಲ್ಲ ಎಂದು ತಿಳಿಸಿದರು.
೧ ಗ್ರಾಂ ಒಡವೆಗೆ ೪೬೦೦ ರೂನಂತೆ ಶೇ.೧ ರ ಬಡ್ಡಿ ದರದಲ್ಲಿ ಇದುವರೆವಿಗೂ ಒಡವೆ ಸಾಲ ಕೊಡಲಾಗುತ್ತಿತ್ತು. ಈಗ ೧ ಗ್ರಾಂ ಒಡವೆ ಬೆಲೆ ೮ ಸಾವಿರ ದಾಟಿದ್ದು ಬೇರೆ ಬೇರೆ ಬ್ಯಾಂಕುಗಳಲ್ಲಿ ೫ ಸಾವಿರಕ್ಕೂ ಹೆಚ್ಚು ಸಾಲ ಕೊಡುತ್ತಿದ್ದಾರೆ. ಹಾಗಾಗಿ ಇನ್ಮುಂದೆ ೧ ಗ್ರಾಂ ಒಡವೆಗೆ ೫೨೦೦ ರೂ.ನಂತೆ ಒಡವೆ ಸಾಲ ಕೊಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಹಿಂದಿನವರು ಈ ಸೊಸೈಟಿ ಕಟ್ಟಿರುವುದೇ ಕೃಷಿಕರಿಗೆ ನೆರವಾಗಲೆಂದು. ಹಾಗಾಗಿ ಶೇರು ಕೇಳುವ ಎಲ್ಲರಿಗೂ ಶೇರು ಹಾಕಿಸಿಕೊಂಡು ಕೃಷಿ ಸಾಲ ಕೊಡ ಬೇಕು. ಹೆಚ್ಚು ಸಾಲದ ಬೇಡಿಕೆ ಇದ್ದರೆ ಸಚಿವರಾದ ಕೆ.ಎನ್.ರಾಜಣ್ಣ ಅವರ ಬಳಿ ನಿಯೋಗ ಹೋಗಿ ಮನವೊಲಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷರಾಗಿ ಪಿ.ಶಿವಣ್ಣ, ಸಿಇಒ ಶಿವಣ್ಣ, ಸದಸ್ಯರುಗಳಾದ ಟಿ.ಜೆ.ಜಗದೀಶ್, ಎಸ್.ರೇವಣ್ಣ, ಎಚ್.ಎ.ಕಿರಣ್‌ಕುಮಾರ್, ಬಿ.ಪರಮೇಶ್, ಟಿ.ಎಸ್.ದಯಾನಂದ, ಕೆಂಚಮ್ಮ, ಎಂ.ಅಶೋಕ್, ಕರಿಯಾನಾಯ್ಕ, ಎಚ್.ಎನ್.ಕಿರಣ್‌ಕುಮಾರ್ ಉಪಸ್ಥಿತರಿದ್ದರು.

(Visited 1 times, 1 visits today)