ಪಾವಗಡ: ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿಯ ಶ್ರೀರಂಗಪುರ ತಾಂಡಾದ ಅಂಗನವಾಡಿ ಕೇಂದ್ರ ಮಾದರಿಯ ಕೇಂದ್ರವಾಗಿ ಹೊರಹೊಮ್ಮಿದ್ದು, ಇಲ್ಲಿನ ಅಂಗನವಾಡಿ ಕಾರ್ಯಕರ್ತೆ ಸುಶೀಲಮ್ಮ ಅವರ ಸೃಜನಶೀಲ ಕೆಲಸಕ್ಕೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ೨ ಗಂಟೆಗೆ ಅಂಗನವಾಡಿಗೆ ಭೇಟಿ ನೀಡಿದ ಅವರು, ಪ್ಲಾಸ್ಟಿಕ್ ಪುನರ್ವ್ಯವಸ್ಥೆಯಿಂದ ತಯಾರಿಸಿದ ಆಕರ್ಷಕ ವಸ್ತುಗಳ ಮೂಲಕ ಮಕ್ಕಳಿಗೆ ಕಲಿಕೆಗೆ ಅನುಕೂಲಕರವಾದ ಪರಿಸರವನ್ನು ಒದಗಿಸಿರುವ ಬಗ್ಗೆ ಶ್ಲಾಘಿಸಿದರು. ಮಕ್ಕಳು ಕಲಿಯುತ್ತಿರುವ ಪ್ರಗತಿಯನ್ನೂ ವೀಕ್ಷಿಸಿ, ಸಾರ್ವಜನಿಕರಿಂದ ಗೃಹಲಕ್ಷ್ಮೀ ಯೋಜನೆಯ ಹಣ ಪಾವತಿ ಕುರಿತು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನ್ ಕುಮಾರ್ ಎಂ.ಎನ್, ಸಿಡಿಪಿಒ ಡಿ.ಜಿ ಸುನೀತ, ಮೇಲ್ವಿಚಾರಣೆ ಅಧಿಕಾರಿ ಭಾಗ್ಯಲಕ್ಷ್ಮಿ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.
ಬೀದಿ ವ್ಯಾಪಾರಿಗಳಿಗೆ ಸಾಲ ವಿತರಣೆ, ಸೋಲಾರ್ ಪಾರ್ಕ್ ಪರಿಶೀಲನೆ ಇದರ ಹಿಂದೆ, ಪಟ್ಟಣದ ಬೀದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಯೋಜನೆಯಡಿ ಸಾಲ ವಿತರಿಸಿ, ಫಲಾನುಭವಿಗಳ ಅನುಭವಗಳನ್ನು ಜಿಲ್ಲಾಧಿಕಾರಿ ಕೇಳಿಕೊಂಡರು. ನಂತರ ತಿರುಮಣಿಯ ಸೋಲಾರ್ ಪಾರ್ಕ್ಗೆ ಭೇಟಿ ನೀಡಿ ಕಾಮಗಾರಿಯ ಪ್ರಗತಿಯ ಪರಿಶೀಲನೆ ನಡೆಸಿದರು.
ಕುಡಿಯುವ ನೀರಿನ ಪೂರೈಕೆ ಮತ್ತು ಮನೆ ನಿರ್ಮಾಣ ಕಾಮಗಾರಿಯ ವೀಕ್ಷಣೆ ನಾಗಲಮಡಿಕೆ ಗ್ರಾಮದಲ್ಲಿ ತುಂಗಭದ್ರಾ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಪರಿಶೀಲಿಸಿ, ಮನೆಮನೆಗೂ ನೀರು ಸರಬರಾಜು ವ್ಯವಸ್ಥೆ ಕುರಿತು ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿದರು. ಅಲ್ಲದೆ, ಪಿಎಂ ಆವಾಸ್ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಮನೆಗಳ ಪ್ರಗತಿಯನ್ನು ವೀಕ್ಷಿಸಿ ಸೂಕ್ತ ಸೂಚನೆ ನೀಡಿದರು.
ರೈಲ್ವೆ ನಿಲ್ದಾಣಕ್ಕೆ ‘ಕೆ.ರಾಮಪುರ’ ನಾಮಕರಣದ ಚರ್ಚೆ ಕೆ. ರಾಮಪುರ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ತುಮಕೂರು-ರಾಯದುರ್ಗ ರೈಲ್ವೆ ನಿಲ್ದಾಣಕ್ಕೆ ‘ಕೆ.ರಾಮಪುರ’ ಎಂದು ನಾಮಕರಣ ಮಾಡುವಂತೆ ಸ್ಥಳೀಯರು ಮನವಿ ಮಾಡಿದಾಗ, ಈ ಬಗ್ಗೆ ಈಗಾಗಲೇ ಗಮನಹರಿಸಿದ್ದು, ರೈಲ್ವೆ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು. ಈ ಕಾರ್ಯಕ್ರಮದಲ್ಲಿ ಮಧುಗಿರಿ ಎಸಿ ಗೋಟುರು ಶಿವಪ್ಪ, ತಹಸೀಲ್ದಾರ್ ಡಿ.ಎನ್ ವರದರಾಜು, ವೈದ್ಯಾಧಿಕಾರಿ ಡಾ. ಜಿ. ಕಿರಣ್, ಕುಡಿಯುವ ನೀರು ಇಲಾಖೆ ಇಂಜಿನಿಯರ್ ಕಾವ್ಯ, ಎಇಇ ಮಹೇಶ್ ಸೇರಿದಂತೆ ಹಲವಾರು ಅಧಿಕಾರಿಗಳು ಭಾಗಿಯಾಗಿದ್ದರು.
(Visited 1 times, 1 visits today)