ಬೆಂಗಳೂರು: ಈ ಸಾರಿಯ ಬಜೆಟ್‌ನಲ್ಲಿ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎತ್ತಿನಹೊಳೆ ಯೋಜನೆಯಡಿ ೨೪೧ ಕಿ ಮೀ ವರೆಗೆ ನೀರು ಹರಿಸುವುದಾಗಿ ಹೇಳಿದ್ದಾರೆ. ಇದರ ಅರ್ಥ ತುಮಕೂರು ಕೊನೆಯ ಭಾಗದ ವರೆಗೆ ನೀರು ಬರುತ್ತದೆ ಮತ್ತು ಜಿಲ್ಲೆಯ ಎಲ್ಲ ಬರಪೀಡಿತ ಪ್ರದೇಶಗಳ ಎಲ್ಲ ಕೆರೆಗಳನ್ನು ತುಂಬಿಸಲಾಗುವುದು ಎಂದು ಅರ್ಥ. ಇದು ಆದರೆ ನಾನೇ ತುಮಕೂರಿನಲ್ಲಿ ೫೦,೦೦೦ ಜನರನ್ನು ಸೇರಿಸಿ ಸಿದ್ದರಾಮಯ್ಯನವರಿಗೆ ಬೆಳ್ಳಿ ಗದೆ ಕೊಟ್ಟು ಸನ್ಮಾನ ಮಾಡುತ್ತೇನೆ. ಅವರಿಂದ ಆ ಕೆಲಸ ಆಗದೇ ಇದ್ದರೆ ಮುಂದಿನ ಬಜೆಟ್‌ನಲ್ಲಿ ಅವರು ಸದನದ ಕ್ಷಮೆ ಕೇಳಬೇಕು.
ವಿಧಾನಸಭೆಯಲ್ಲಿ ಸೋಮವಾರ ರಾತ್ರಿ ಬಜೆಟ್ ಮೇಲಿನ ಮುಂದುವರಿದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ತುಮ ಕೂರು ಗ್ರಾಮಾಂತರ ಶಾಸಕ ಬಿ. ಸುರೇಶಗೌಡರು ಹಾಕಿದ ಪಂಥಾಹ್ವಾನ ಇದು.
ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಯಡಿ ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು ೫೨೪ ಮೀಟರ್‌ಗೆ ಏರಿಸಿ ಮುಳುಗಡೆಯಾಗುವ ೧.೨೨ ಲಕ್ಷ ಎಕರೆ ಭೂಮಿಯ ಒಡೆಯರಿಗೆ ಪರಿಹಾರವನ್ನೂ ಕೊಡುತ್ತೇವೆ ಎಂದು ಹೇಳುತ್ತಾರೆ. ಇದಕ್ಕೆ ೮೭,೦೦೦ ಕೋಟಿ ರೂಪಾಯಿ ಬೇಕಾಗುತ್ತದೆ. ಈ ಬಜೆಟ್‌ನಲ್ಲಿ ಬರೀ ಸುಳ್ಳುಗಳನ್ನು ತುಂಬಿದ್ದಾರೆ ಎನ್ನುವುದಕ್ಕೆ ಇದು ನಿದರ್ಶನ ಎಂದು ಅವರು ಟೀಕಿಸಿದಾರೆ. ಎತ್ತಿನ ಹೊಳೆ ಯೋಜನೆಯಡಿ ಮಧುಗಿರಿ, ಕೊರಟಗೆರೆ ಭಾಗದ ಕೆರೆಗಳನ್ನು ತುಂಬಿಸಲು ೫೫೦ ಕೋಟಿ ರೂಪಾ ಯಿ ತೆಗೆದು ಇರಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಆ ಕೆಲಸ ಕಾಲಮಿತಿಯಲ್ಲಿ ಬೇಗ ಮಾಡಿಸಿಕೊಡಬೇಕು ಎಂದು ಅವರು ಮನವಿ ಮಾಡಿದರು.
ಕಾವೇರಿ ನೀರಾವರಿ ನಿಗಮದ ಸಭೆ ಯಾಗಿದೆ. ಮೀಟಿಂಗ್ ಮಿನಿಟ್‌ಗೆ ಇನ್ನೂ ರುಜು ಕೂಡ ಆಗಿಲ್ಲ. ಇನ್ನು ರುಜು ಆಗುವುದು ಯಾವಾಗ, ಹಣ ಬರುವುದು ಯಾವಾಗ ಎಂದು ಕಾಂಗ್ರೆಸ್ ಶಾಸಕರೇ ಚಿಂತಿಸುತ್ತಿದ್ದಾರೆ ಎಂದು ಅವರು ಸದನದ ಗಮನ ಸೆಳೆದರು.
ಈ ಸರ್ಕಾರದ ಮೊದಲ ಆದ್ಯತೆಯೇ ಸಾಲ ಮರುಪಾವತಿಯಾಗಿದೆ. ಒಂದು ರೂಪಾಯಿಯಲ್ಲಿ ೧೮ ಪೈಸೆ ಸಾಲದ ಮರುಪಾವತಿಗೇ ಹೋಗುತ್ತದೆ. ಉಳಿದ ಅಭಿವೃದ್ಧಿ ಯೋಜನೆಗಳು ನಂತರದ ಸ್ಥಾನದಲ್ಲಿ ಇವೆ. ಹೀಗಿರುವಾಗ ಬಡತನ ನಿವಾರಣೆ ಆಗುವುದು ಹೇಗೆ ಸಾಧ್ಯ? ರಾಹುಲ್ ಗಾಂಧಿಯವರು ಲೋಕಸಭೆ ಚುನಾವಣೆಯಲ್ಲಿ ಮಹಿಳೆ ಯರ ಖಾತೆಗೆ ೮,೫೦೦ ಕೋಟಿ ರೂಪಾಯಿ ಹಾಕುತ್ತೇವೆ, ಹಾಕಿದರೆ ಟಕಾ ಟಕ್ ಬಡತನ ನಿವಾರಣೆ ಆಗುತ್ತದೆ ಎಂದಿದ್ದರು. ಮೈಮುರಿದು ದುಡಿದರೇ ಬಡತನ ನಿವಾರಣೆ ಆಗುವುದಿಲ್ಲ. ಯಾರಾದರೂ ನಮ್ಮ ಖಾತೆಗೆ ಹಣ ಹಾಕಿದರೆ ಬಡತನ ನಿವಾರಣೆ ಆಗುತ್ತದೆಯೇ? ಹಾಗಿದ್ದರೆ ೧೯೭೧ ರಲ್ಲಿಯೇ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರು ಗರೀಬಿ ಹಟಾವೊ ಎಂದು ಘೋಷಣೆ ಕೂಗಿದ್ದರು. ಬಡತನ ಎಲ್ಲಿ ನಿವಾರಣೆ ಅಯಿತು ಎಂದು ಅವರು ಕೇಳಿದರು.
ಸಿದ್ದರಾಮಯ್ಯನವರು ಈಗ ಕಾಲಿನ ನೋವಿನಿಂದ ಗಾಲಿ ಖುರ್ಚಿ ಮೇಲೆ ಅಡ್ಡಾಡುತ್ತಿದ್ದಾರೆ. ಅವರು ಬೇಗ ಚೇತರಿಸಿಕೊಂಡು ಎಂದಿನAತೆ ನಡೆಯುವಂತೆ ಆಗಲಿ ಎಂದು ಹಾರೈಸಿದ ಸುರೇಶ ಗೌಡರು, `ಪಂಚ ಗ್ಯಾರಂಟಿ ಯೋಜನೆಗಳು ಮತ್ತು ಅವುಗಳಿಂದ ಉಂಟಾದ ಆರ್ಥಿಕ ಅಶಿಸ್ತಿನಿಂದಾಗಿ ಮುಖ್ಯಮಂತ್ರಿಗಳು ಪ್ರಗತಿಪರ ರಾಜ್ಯದ ಆರ್ಥಿಕತೆಯನ್ನು ಗಾಲಿ ಖುರ್ಚಿಯ ಮೇಲೆ ಬಿಟ್ಟು ಹೋಗುತ್ತಿದ್ದಾರೆ’ ಎಂದು ಟೀಕಿಸಿದರು.
ಇನ್ನು ಮೇಲೆ ಈ ರಾಜ್ಯದ ಹಣಕಾಸು ವ್ಯವಸ್ಥೆ ಗಾಲಿ ಖುರ್ಚಿಯ ಮೇಲೆಯೇ ಇರಬೇಕಾಗುತ್ತದೆ. ಇದನ್ನು ಯಾರಾದರೂ ತಳ್ಳಿಕೊಂಡು ಹೋಗಬೇಕಾಗುತ್ತದೆ ಎಂದು ಅವರು ಛೇಡಿಸಿದರು. ಜನವಿರೋಧಿಯಾದ ಈ ಬಜೆಟ್ ಅನ್ನು ತಾವು ವಿರೋಧಿಸುವುದಾಗಿ ಅವರು ತಿಳಿಸಿದರು.

(Visited 1 times, 1 visits today)