ಹುಳಿಯಾರು: ಹುಳಿಯಾರು ಹೋಬ ಳಿಯ ಬರಕನಾಳು ಗ್ರಾಮ ಪಂಚಾಯತಿಯ ಬಾಲದೇವರಹಟ್ಟಿಯ ಜನಪದ ಹಾಡು ಗಾರ್ತಿ ಕರಿಯಮ್ಮ ಅವರಿಗೆ ಸಾಧಕ ಮಹಿಳೆ ಪ್ರಶಸ್ತಿ ಲಭಿಸಿದೆ. ಕರ್ನಾಟಕ ಲೇಕಕಿಯರ ಸಂಘ, ತುಮಕೂರು ಶಾಖೆಯಿಂದ ದಿ|| ಸೋಮವತಿ ಮತ್ತು ದಿ|| ಇಂದಿರಮ್ಮ ಅವರ ನೆನಪಿನ ದತ್ತಿ ಪ್ರಶಸ್ತಿ ಇದಾಗಿದ್ದು ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಾರ್ಚ್೨೦ ರ ಗುರುವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಲಿದ್ದಾರೆ.
ಮದುವೆಯಾಗಿ ಒಂದು ಮಗುವಿನ ತಾಯಿ ಯಾಗಿ, ಕೆಲವೇ ತಿಂಗಳ ನಂತರ ಸಂಗಾತಿ ಮರಿಯಣ್ಣ ಅವರನ್ನು ಕಳೆದುಕೊಳ್ಳುವರು. ಹಾಲುಗಳ್ಳಿನ ನವಜಾತ ಶಿಶು. ವಿಕಲಚೇತನೆಯಾದ ಆಕೆಯ ಅತ್ತೆ. ಮನೆತನದ ಜವಾಬ್ದಾರಿ ಕರಿಯಮ್ಮನ ಹೆಗಲಿಗೆ ಬೀಳುತ್ತವೆ. ಕಿರಿಯ ವಸ್ಸಿನಲ್ಲೇ ಒಕ್ಕಲು ತನಕ್ಕೆ ಕೊರಳು ಕೊಡುವರು. ಹೆಗಲು ಬಾವು, ಎದೆಬಾವುಗಳಂತಹ ಕಷ್ಟಗಳು ಎದುರಾಗುವವು. ಕಳೆದು ಹೋದ ಕಷ್ಟಗಳ ಮರೆಯಲು ಹಾಡುಗಾರಿಕೆಯ ಬೆನ್ನಿಗೆ ಬೀಳುವರು.
ಬಲಗೊಂಡ, ಯಡಗೊಂಡ, ಮಾಳಮ್ಮ, ಚಿತ್ತಯ್ಯ, ಈರಬೊಮ್ಮಕ್ಕ, ಜಡೆಗೊಂಡ, ಹುಲಿಕಡಿದ ಚನ್ನಯ್ಯ, ಸೋಬಾನೆ ಮಂಗಳಾರತಿ ಪದಗಳು, ಹಸೆ ಪದಗಳು, ಜಾಡಿ ಪದಗಳು, ಉತ್ಸವ ಪದಗಳು ಮೊದಲಾದವುಗಳ ಕುರಿತು ಜಾನಪದವನ್ನು ದ್ವನಿಪೂರ್ಣವಾಗಿ ಹಾಡುವ ಇವರು ಪದಗಾತಿ ಕರಿಯಮ್ಮ ಎಂದು ಕ್ರಮೇಣ ಗುರುತಿಸಿಕೊಳ್ಳುವರು. ಕಾಡುಗೊಲ್ಲರ ಬುಡಕಟ್ಟು ದೇವರು ಮಾಡಿಕೊಂಡ ಚಾರಿತ್ರಿಕ ಸಂಗತಿಯನ್ನು ಹಾಡಿ ಇತಿಹಾಸವಾಗಿಸಿದ ಕರಿಯಮ್ಮ ಓದು, ಬರೆಹ ಅರಿಯದವರು. ಆ ದರೆ ಇವರ ಎದೆಗೂಡಿನಲ್ಲಿ ಸಾವಿರದ ಪದಗಳು ಯಾವತ್ತಿಗೂ ಹತ್ತು ಹಲವು ಜಾನಪದ ಪಠ್ಯಗಳಾಗಿ ಉಳಿದಿವೆ. ಇವತ್ತಿಗೂ ಕರಿಯಮ್ಮನ ಮನೆತನದ ಒಣ ಬೇಸಾಯದ ಬದುಕು ಕಷ್ಟಕರವಾಗಿಯೇ ಮುಂದು ವರಿದಿರುವುದು. ಬುಡಕಟ್ಟು ಸಮುದಾಯದೊಳಗೆ ಪದಗಳನ್ನು ಬಿತ್ತುತ್ತಲೇ ಬದುಕುತಿದ್ದಾರೆ. ಅವರ ತಬ್ಬಲಿ ಬದುಕಿನ ಜವಾಬ್ದಾರಿ ಹೊತ್ತರು. ಹೋರಾಟದ ಬದುಕು ಮುಂದುವರಿದು ತನ್ನ ಮೊಮ್ಮಗನಿಗೆ ಕಾನೂನು ಪದವಿ ಓದಲು, ಮೊಮ್ಮಗಳು ಪಿಯುಸಿ ವ್ಯಾಸಂಗ ಮಾಡಲು ದಣಿವರಿಯದೆ ಶ್ರಮಿಸುತ್ತಿರುವ ಕರಿಯಮ್ಮನನ್ನು ಲೇಖಕಿಯರ ಸಂಘ ಗುರುತಿಸಿ ಸಾಧಕ ಮಹಿಳೆ ಪ್ರಶಸ್ತಿ ನೀಡುತ್ತಿದೆ.

(Visited 1 times, 1 visits today)