ತುಮಕೂರು: ರಾಜಕಾರಣಿಗಳ,ಮುಖಂಡರ ಒತ್ತಡಕ್ಕೆ ಮಣಿದು ವಿಶ್ವವಿದ್ಯಾಲಯಗಳಲ್ಲಿ ಆರಂಭವಾಗುವ ಮಹನೀಯ ರ ಅಧ್ಯಯನ ಪೀಠಗಳು ಅನುದಾನದ ಕೊರತೆಯಿಂದ ಅಧ್ಯಯನ ಪೀಠಗಳಾಗದೆ, ಬಡ್ಡಿ ಪೀಠಗಳಾಗಿ ಬದಲಾಗುತ್ತಿರು ವುದು ವಿಷಾದದ ಸಂಗತಿಗಳಾಗಿವೆ ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕನ್ನಡ ಭವನದಲ್ಲಿ ಶೈನಾ ಅಧ್ಯಯನ ಸಂಸ್ಥೆ, ಜಿಲ್ಲಾ ಕಸಾಪ, ಡಮರುಗ ರಂಗ ಸಂಪನ್ಮೂಲ ಕೇಂದ್ರ ವತಿಯಿಂದ ಡಾ.ಬಿ.ಸಿ.ಶೈಲಾನಾಗರಾಜು ರಚಿಸಿರುವ ನೀಲಾಂಬಿಕೆ ನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಲಾಗುವ ಅಧ್ಯಯನ ಪೀಠಗಳಿಗೆ ಕನಿಷ್ಠ ಸರಕಾರ ೨ ಕೋಟಿ ರೂ ಇಡಿಗಂಟು ನೀಡುವಂತಾದರೆ,ಅದರಿAದ ಬರುವ ಅದಾಯದಲ್ಲಿ ಒಂದಷ್ಟು ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಇಲ್ಲವೆಂದರೆ ಹೆಸರಿಗಷ್ಟೇ ಅಧ್ಯಯನ ಕೇಂದ್ರವಾಗಿ,ಉಪಯೋಗಕ್ಕೆ ಬಾರದಂತಾಗುತ್ತೇವೆ.ಸರಕಾರಗಳು ನೈತಿಕವಾಗಿ, ಅರ್ಥಿಕವಾಗಿ ವಿವಿಗಳನ್ನು ಬಲಪಡಿಸಬೇಕಾಗಿದೆ ಎಂದರು.
ಮೈಸೂರು ವಿವಿಯ ಬಸವ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕನಾಗಿದ್ದಾಗ ಅಜ್ಞಾತದಲ್ಲಿದ್ದ ಅನೇಕ ವಚನಕಾರ್ತಿಯರನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ವಚನ ಚಿಂತನಮಾಲೆ ಎಂಬ ಹೆಸರಿನಲ್ಲಿ ಸುಮಾರು ೩೧ ಪುಸ್ತಕಗಳನ್ನು ಹೊರತಂದಿದ್ದು,ಅದರಲ್ಲಿ ಡಾ.ಬಿ.ಸಿ.ಶೈಲಾ ನಾಗರಾಜು ಬರೆದಿರುವ ನೀಲಾಂಬಿಕೆಯೂ ಒಂದು.ಅದು ಇಂದು ತುಮಕೂರು ವಿವಿಯ ಪಠ್ಯವಿಷಯವಾಗಿರುವುದು ಸಂತೋಷದ ವಿಷಯವಾಗಿದೆ.ಅಜ್ಞಾತವಾಗಿದ್ದುಕೊಂಡೇ ಅನೇಕರು ತಮ್ಮ ಕಾಯಕದ ಮೂಲಕವೇ ಅಗಾಧವಾದ ಸಾಹಿತ್ಯವನ್ನು ರಚಿಸಿದ್ದಾರೆ.ಅಂತಹವರನ್ನು ಬೆಳಕಿಗೆ ತರುವ ಕೆಲಸ ವಿಶ್ವವಿದ್ಯಾಲಯಗಳು ಮಾಡಬೇಕು. ಅದೇ ನಿಜವಾದ ಸಂಶೋಧನೆ. ಆ ಮೂಲಕ ಜನರಿಗೆ ಹೊಸದನ್ನು ನೀಡುವ ಕೆಲಸ ವಿವಿಗಳಿಂದ ಆಗಬೇಕು ಎಂದು ಪ್ರೊ.ಬರಗೂರು ರಾಮಚಂದ್ರಪ್ಪ ನುಡಿದರು.
ಅನುದಾನದ ಕೊರತೆಯಿಂದ ವಿಶ್ವವಿದ್ಯಾಲಯಗಳ ಅಧ್ಯಯನ,ಅಧ್ಯಾಪನ ಹಾಗೂ ಸಂಶೋಧನೆಗಳು ಕುಂಠಿತವಾಗಿವೆ. ತಂತ್ರಜ್ಞಾನಕ್ಕೆ ಸಿಗುತ್ತಿರುವ ಅತಿಯಾದ ಮಹತ್ವದಿಂದ ಮೂಲ ವಿಜ್ಞಾನವೂ ಸೇರಿದಂತೆ ಅನೇಕ ವಿಷಯಗಳ ಬೆಳವಣಿಗೆಗೆ ಹಿನ್ನೆಡೆಯಾಗಿದೆ.ಮೂಲ ವಿಜ್ಞಾನವಾದ ಬಿಎಸ್ಸಿಗೆ ಸೇರುವವರ ಸಂಖ್ಯೆಯೇ ಕ್ಷೀಣಿಸುತ್ತಿದೆ.ಪಠಾಣ್ ವರದಿಯ ಪ್ರಕಾರ ಒಂದು ಸುಸಜ್ಜಿತ ವಿಶ್ವವಿದ್ಯಾಲಯ ಆಗಬೇಕೆಂದರೆ ಕನಿಷ್ಠ ೨೦೦-೩೦೦ ಕೋಟಿ ಅಗತ್ಯವಿದೆ.ಸರಕಾರಗಳು ಶಿಕ್ಷಣವನ್ನು ಅದ್ಯತೆಯ ವಿಷಯವಾಗಿ ಪರಿಗಣಿಸಬೇಕು. ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ, ಅಧ್ಯಾಪನ, ಸಂಶೋಧನೆಗೆ ಒತ್ತ ನೀಡಿ, ವಿವಿಗಳು ವಿವಾದದ ಕೇಂದ್ರಗಳಾಗುವುದನ್ನು ತಡೆಯಬೇಕೆಂದು ಸಲಹೆ ನೀಡಿದರು.
ಶರಣ ಚಳವಳಿಯ ವೇಳೆ ಅನೇಕ ಮಹಿಳಾ ಲೇಖಕಿಯರನ್ನು ಕಾಣಬಹುದು.ಆ ನಂತರದ ದಿನಗಳಲ್ಲಿ ಮಹಿಳಾ ಲೇಖಕಿಯರು ಏಕೇ ಬರೆಯಲಿಲ್ಲ. ಇದರ ಹಿಂದಿನ ಕಾರಣಗಳೇನು ಎಂಬ ಬಗ್ಗೆ ಸಂಶೋಧನೆಗಳು ನಡೆದರೆ ಮಹಿಳಾ ಸಾಹಿತ್ಯದ ಬಗ್ಗೆ ಹೆಚ್ಚು ಬೆಳಕು ಚಲ್ಲಬಹುದು.ಆಜ್ಞಾತರ ಅನಾವರಣವೇ ನಿಜವಾದ ವಿಕಾಸ ಎಂದು ಡಾ.ಬರಗೂರ ರಾಮಚಂದ್ರಪ್ಪ ನುಡಿದರು
ತುಮಕೂರು ವಿವಿ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಡಾ.ನಿತ್ಯಾನಂದ ಬಿ.ಶೆಟ್ಟಿ ಮಾತನಾಡಿ, ನೀಲಾಂಭಿಕೆ ನಾಟಕದ ರಂಗರೂಪ ಬಂದಿರುವುದು ಸಂತೋಷದ ವಿಚಾರ.ಇದು ಕಥೆಯ ಮರುಹುಟ್ಟು, ಇದು ಮತ್ತಷ್ಟು ಬೆಳೆಯಬೇಕೆಂದರೆ ರಂಗರೂಪವನ್ನು ಸಿಡಿ ರೂಪದಲ್ಲಿ ಚಿತ್ರೀಕರಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಿಸುವ ಮೂಲಕ ವಿಸ್ತರಿಸುವ ಕೆಲಸ ಆಗಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನೀಲಾಂಬಿಕೆ ನಾಟಕ ರಚನೆಕಾರರಾ ಡಾ.ಬಿ.ಸಿ.ಶೈಲಾನಾಗರಾಜು, ಡಾ.ಬರಗೂರು ರಾಮಚಂದ್ರಪ್ಪ ಅವರದ್ದು ತಾಯಿಯ ಕರುಳು ಮತ್ತು ಕೊರಳು, ಅವರು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಹೊರತಂದ ಸಾಮಾಜಿಕ ಚಿಂತನ ಮಾಲೆಯಲ್ಲಿ ಮಾಟೀನ್ ಲೂಥರ್ ಅವರ ಬಗ್ಗೆ, ಹಾಗೆಯೇ ಮೈಸೂರು ವಿವಿ ಬಸವ ಅಧ್ಯಯನ ಕೇಂದ್ರದ ಸಂದರ್ಶನ ಪ್ರಾಧ್ಯಾಪಕರಾಗಿದ್ದಾಗ ಹೊರತಂದಿರುವ ವಚನಚಿಂತನಮಾಲೆ ವೇಳೆ ನೀಲಾಂಬಿಕೆ ಎರಡು ಪುಸ್ತಕಗಳನ್ನು ನನ್ನಿಂದ ಬರೆಸಿದ್ದಾರೆ. ನನ್ನಂತಹ ಅನೇಕರನ್ನು ಸಾಹಿತ್ಯಿಕವಾಗಿ ಬೆಳೆಸುವ ಮೂಲಕ ತಾವು ಬೆಳೆದಿದ್ದಾರೆ.ಮನುಷ್ಯ ಪ್ರೀತಿಯ ಸಕಾರ ಮೂರ್ತಿಯಾಗಿ,ಸವಾಲನ್ನು ಸ್ವೀಕರಿಸುವವರಿಗೆ ಚೈತನ್ಯಮೂರ್ತಿಯಾಗಿ ಸದಾ ಪ್ರೋತ್ಸಾಹ ನೀಡುತಿದ್ದಾರೆ.ನಾನು ಬರೆದ ನೀಲಾಂಬಿಕೆ ಪುಸ್ತಕ ನಾಟಕ ರೂಪದಲ್ಲಿ ಇಂದು ಪ್ರಯೋಗಗೊಳ್ಳುತ್ತಿದೆ. ಮೇಳೆಹಳ್ಳಿಯ ಡಮರುಗ ರಂಗಸAಪನ್ಮೂಲ ಕೇಂದ್ರದ ದೇವರಾಜು ಅವರ ನಿರ್ದೇಶನದಲ್ಲಿ ಇಂದು ಪ್ರದರ್ಶನಗೊಳ್ಳುತ್ತಿದೆ. ಇದಕ್ಕೆ ಸಹಕಾರ ನೀಡಿದ ಎಲ್ಲರನ್ನು ಸ್ಮರಿಸುವುದಾಗಿ ತಿಳಿಸಿದರು.
ಕಾರ್ಯಕ್ರಮವನ್ನು ದೊಂಬರನಹಳ್ಳಿ ನಾಗರಾಜು ನಿರೂಪಿಸಿದರು. ವೇದಿಕೆಯಲ್ಲಿ ಪತ್ರಕರ್ತರಾದ ಎಸ್.ನಾಗಣ್ಣ, ಪ್ರಾಚೀನ ಕಾವ್ಯಗಳ ಪ್ರವಚನಕಾರರಾದ ಮುರುಳೀಕೃಷ್ಣಪ್ಪ, ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ,ಮಾಜಿ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ವರದಕ್ಷಿಣೆ ವಿರೋಧಿ ವೇದಿಕೆಯ ಮಾಜಿ ಅಧ್ಯಕ್ಷೆ ಶ್ರೀಮತಿ ಜೀವರತ್ನ, ಡಾ.ಡಿ.ಎನ್.ಯೋಗೀಶ್ವರಪ್ಪ, ಡಮರುಗ ರಂಗಸAಪನ್ಮೂಲ ಕೇಂದ್ರದ ಮೇಳೆಹಳ್ಳಿ ದೇವರಾಜು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಮೆಳೇಹಳ್ಳಿಯ ಡಮರುಗ ರಂಗಸAಪನ್ಮೂಲ ಕೇಂದ್ರದ ಕಲಾವಿದರಿಂದ ಡಾ.ಬಿ.ಸಿ.ಶೈಲಾ ನಾಗರಾಜು ರಚಿಸಿರುವ ನೀಲಾಂಬಿಕೆ ನಾಟಕ ಪ್ರದರ್ಶನಗೊಂಡಿತ್ತು
(Visited 1 times, 1 visits today)