ತುಮಕೂರು: ಎಸ್‌ಎಸ್‌ಎಲ್‌ಸಿ ವರೆಗೂ ಹೆಣ್ಣು ಮಕ್ಕಳೇ ಮುಂದೆ ಇರುತ್ತಾರೆ. ಆಮೇಲೆ ಅವರು ಎಲ್ಲಿ ಹೋಗುತ್ತಾರೋ ತಿಳಿಯುವುದಿಲ್ಲ. ಹೀಗಾಗಿ ಮಹಿಳೆ ಶಿಕ್ಷಣದಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ಲೇಖಕಿ ದು.ಸರಸ್ವತಿ ಹೇಳಿದರು.
ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆ ಮತ್ತು ಸರ್ಕಾರಿ ಪಾಲಿಟೆಕ್ನಿಕ್ ವತಿಯಿಂದ ಮಾರ್ಚ್ ೨೦ರಂದು ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳು ಓದಿಯೇ ಇಲ್ಲ ಅಂದರೆ ಉದ್ಯೋಗ ಎಲ್ಲಿಯದು? ಎಲ್ಲ ಹೆಣ್ಣು ಮಕ್ಕಳು ಶಾಲೆ ಬಿಟ್ಟು ಕೂಲಿನಾಲಿ ಮಾಡಿಕೊಂಡಿರುವುದನ್ನು ನಾವು ಕಾಣುತ್ತೇವೆ. ಹೆಣ್ಣು ಮಕ್ಕಳಿಗೆ ಆರೋಗ್ಯವೇ ಸರಿ ಇರುವುದಿಲ್ಲ. ತಾಯ್ತನದ ಮರಣ ಸಂಖ್ಯೆ ಹೆಚ್ಚಾಗಿದೆ. ಶಿಶು ಹತ್ಯೆ ಜಾಸ್ತಿ ಆಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹೆಣ್ಣು ಮಕ್ಕಳ ಮೇಲೆ ಹಿಂಸೆ, ದೌರ್ಜನ್ಯ ಎಥೇಚ್ಚವಾಗಿ ನಡೆಯುತ್ತಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮಹಿಳೆಯರ ಮೇಲಿನ ಹಿಂಸೆ, ದೌರ್ಜನ್ಯದಲ್ಲಿ ಮೇಲಿನ ಸ್ಥಾನದಲ್ಲಿದ್ದೇವೆ. ೭೫ ರಿಂದ ೮೫ರವರೆಗೂ ಮಹಿಳಾ ದಶಕ ಅಂತ ಮಾಡಿದರು. ಹೀಗಾಗಿ ಸರ್ಕಾರ ಪಂಚವಾರ್ಷಿಕ ಯೋಜನೆಯಲ್ಲಿ ಹೆಣ್ಣು ಮಕ್ಕಳ ಅಭಿವೃದ್ಧಿ ಮತ್ತು ಸಬಲೀಕರಣದಡಿ ಯೋಜನೆಯನ್ನು ರೂಪಿಸಿದರು.
ನೀವು ಒಳ್ಳೆಯ ಉದ್ಯೋಗ ಪಡೆದುಕೊಳ್ಳುತ್ತೀರಿ ಅಂದರೆ ಅದು ಒಳ್ಳೆಯ ಸಮಾಜದ ಲಕ್ಷಣ. ಇದೆಲ್ಲವೂ ಬರಬೇಕೆಂದರೆ ಅಸಮಾನತೆ,, ತಾರತಮ್ಯ ಹೋಗಬೇಕು. ಯಾಕೆ ಕೂಲಿ ಮಾಡುವವರ ಮಕ್ಕಳು ಶಾಲೆಗೆ ಹೋಗುವುದಿಲ್ಲ. ಯಾಕೆ ಸ್ಲಂ ನಲ್ಲಿರುವ ಮಕ್ಕಳು ಶಾಲೆಗೆ ಬರಬಾರದು. ಕೆಳ ಜಾತಿ, ಸಮುದಾಯದ ಹೆಣ್ಣು ಮಕ್ಕಳು ಮತ್ತು ಗಂಡುಮಕ್ಕಳು ಶಾಲೆಗೆ ಬರಬಾರದು ಎಂದು ಪ್ರಶ್ನಿಸಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಮಲ್ಲಿಕಾ ಬಸವರಾಜು, ರಾಜ್ಯ ಮಟ್ಟದಲ್ಲಿ ಕಲೇಸಂ ಹುಟ್ಟಿದ ಕೆಲವೇ ತಿಂಗಳಲ್ಲಿ ತುಮಕೂರಿನಲ್ಲೂ ಕಲೇಸಂ ಘಟಕವನ್ನು ಸ್ಥಾಪಿಸಲಾಯಿತು. ಶಾಲಾ -ಕಾಲೇಜುಗಳಲ್ಲಿ ಪದವಿ ಕಾಲೇಜುಗಳಲ್ಲಿ ವಿಶ್ವವಿ ದ್ಯಾಲಯದಲ್ಲಿ, ಇಂಜಿನಿಯರಿAಗ್ ಕಾಲೇಜುಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದ್ದೇವೆ ಎಂದು ಹೇಳಿದರು.
ಸಮಸಮಾಜ ಕಟ್ಟಲು ಹೆಣ್ಣು ಮಕ್ಕಳ ಜೊತೆಗೆ ಗಂಡು ಮಕ್ಕಳು ಕಾರ್ಯಕ್ರಮಕ್ಕೆ ಬರಬೇಕು. ಇದು ನಮ್ಮ ಸಂಘಟನೆಯ ಧ್ಯೇಯ. ಹಾಗಾಗಿ ಹೆಣ್ಣು-ಗಂಡು ಇಬ್ಬರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಮೇಜರ್ ಅನಿಲ್ ಕುಮಾರ್ ವಹಿಸಿ ಮಾತನಾಡಿದರು. ಕಲಾವಿದೆ ರೇಣುಕಾ ಕೆಸರುಮಡು ಅವರು ಜನಪದ ಹಾಡುಗಾರ್ತಿ ಕರಿಯಮ್ಮ ಅವರಿಗೆ ಸಾಧಕ ಮಹಿಳೆ ಪ್ರಶಸ್ತಿ ಪ್ರದಾನ ಮಾಡಿದರು. ಸರ್ಕಾರಿ ಪಾಲಿಟೆಕ್ನಿಕ್ ಕುಲಸಚಿವೆ ಡಿ.ವೀಣ, ಕಲೇಸಂ ಉಪಾಧ್ಯಕ್ಷೆ ಸಿ.ಎ.ಇಂದಿರಾ ಇದ್ದರು.

(Visited 1 times, 1 visits today)