ಹುಳಿಯಾರು: ಒಂದು ತಲೆಗೆ ೧೫ ಕೆಜಿ ಅಕ್ಕಿ ಬದಲು ೧೦ ಕೆಜಿ ಅಕ್ಕಿ ಕೊಡುತ್ತಿದ್ದನ್ನು ಖಂಡಿಸಿ ಕಾರ್ಡ್ದಾರರು ಸೊಸೈಟಿ ಮುತ್ತಿಗೆ ಹಾಕಿ ವಂಚನೆಯ ವಿರುದ್ಧ ಸಿಡಿದೆದ್ದ ಘಟನೆ ಹುಳಿಯಾರು ಹೋಬಳಿಯ ಗೌಡಗೆರೆಯಲ್ಲಿ ಶುಕ್ರವಾರ ಜರುಗಿದೆ.
ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಕೊರೆತೆ ಯಿಂದಾಗಿ ಇಲ್ಲಿಯವರೆವಿಗೂ ತಲಾ ೫ ಕೆಜಿ ಅಕ್ಕಿ ಉಳಿದ ೫ ಕೆಜಿಗೆ ಕಾರ್ಡ್ದಾರರ ಖಾತೆಗೆ ಹಣ ಸಂದಾಯ ಮಾಡಲಾಗುತ್ತಿತ್ತು. ಫೆಬ್ರವರಿ ಮಾಹೆ ಯಿಂದಲೇ ಹಣದ ಬದಲು ಅಕ್ಕಿ ಕೊಡುವುದಾಗಿ ಸರ್ಕಾರ ಘೋಷಿಸಿ ಮಾರ್ಚ್ ತಿಂಗಳ ೧೦ ಕೆಜಿ ಅಕ್ಕಿಯ ಜೊತೆಗೆ ಫೆಬ್ರವರಿ ಮಾಹೆಯ ೫ ಕೆಜಿ ಅಕ್ಕಿಯನ್ನೂ ಸೇರಿಸಿ ತಲಾ ೧೫ ಕೆಜಿ ಅಕ್ಕಿ ವಿತರಣೆಗೆ ಮುಂದಾಗಿದೆ. ಅದರೆ ಗೌಡಗೆರೆಯ ನ್ಯಾಯಬೆಲೆ ಅಂಗಡಿಯಲ್ಲಿ ಸರ್ಕಾರ ನೀಡಿರುವಂತೆ ಯಾರೊಬ್ಬರಿಗೂ ೧೫ ಕೆಜಿ ಅಕ್ಕಿ ವಿತರಿಸದೆ ೧೦, ೧೨, ೧೪ ಹೀಗೆ ವ್ಯಕ್ತಿಯನ್ನು ನೋಡಿ ಅಕ್ಕಿ ವಿತರಿಸಲಾಗುತ್ತಿತ್ತು.
ವೃದ್ಧರು, ವಿದ್ಯಾರ್ಥಿಗಳು, ಅನಕ್ಷರಸ್ತರು ಬಂದರೆ ತಲಾ ೧೦ ಕೆಜಿ ಅಕ್ಕಿ, ಪುರುಷರು ಬಂದರೆ ೧೩ ಅಥವಾ ೧೪ ಕೆಜಿ ಅಕ್ಕಿ ಹೀಗೆ ತೂಕದಲ್ಲಿ ವಂಚಿ ಸಲಾಗುತ್ತಿತ್ತು. ಅಂತ್ಯೋದಯ ಕಾರ್ಡ್ದಾರರಿಗೆ ೩ ಮಂದಿಯವರೆವಿಗೆ ೩೫ ಕೆಜಿ ನಂತರ ತಲಾ ಒಬ್ಬರಿಗೆ ೧೦ ಕೆಜಿ ಅಕ್ಕಿ ಹೆಚ್ಚುವರಿಯಾಗಿ ವಿತರಿಸುವುದರ ಬದಲು ನಾಲ್ಕು, ಐದು, ಆರು ಹೀಗೆ ಕುಟುಂಬದ ಸದಸ್ಯರು ೩ ಕ್ಕಿಂತ ಹೆಚ್ಚಿದ್ದರೂ ಸಹ ೩೫ ಕೆಜಿ ಅಕ್ಕಿ ಮಾತ್ರ ವಿತರಿಸಲಾಗುತ್ತಿತ್ತು.
ಸಹಜವಾಗಿ ಇದರಿಂದ ಆಕ್ರೋಶಗೊಂಡ ಕಾರ್ಡ್ ದಾರರು ಸೊಸೈಟಿಗೆ ಮುತ್ತಿಗೆ ಹಾಕಿ ತೂಕದಲ್ಲಿ ವಂಚಿಸುತ್ತಿದ್ದನ್ನು ಪ್ರಶ್ನಿಸಿದರು. ಅಕ್ಕಿ ಕಡಿಮೆ ಬಂದಿದೆ ಅಡ್ಜೆಸ್ಟ್ ಮಾಡಿ ಕೊಡಿ ಎಂದು ಮೇಲಧಿಕಾರಿಗಳು ಹೇಳಿರುವುದರಿಂದ ಕಡಿಮೆ ಕೊಡಲಾಗುತ್ತಿದೆ ಎಂದು ಸೊಸೈಟಿಯ ರಾಜು ಸಬೂಬು ಹೇಳಿದರು. ತಕ್ಷಣ ಆಹಾರ ನಿರೀಕ್ಷಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸೂಸೈಟಿಯಲ್ಲಾಗುತ್ತಿರುವ ಅನ್ಯಾಯದ ಬಗ್ಗೆ ಗಮನಕ್ಕೆ ತಂದರಲ್ಲದೆ ಖುದ್ದು ಸ್ಥಳಕ್ಕೆ ಬಂದು ವಂಚನೆಯನ್ನು ಕಣ್ಣಾರೆ ನೋಡಿ ನ್ಯಾಯ ಕೊಡಬೇಕೆಂದು ಪಟ್ಟು ಹಿಡಿದರು.
ಪರಿಣಾಮ ಆಹಾರ ನಿರೀಕ್ಷಕ ಪ್ರಜ್ವಲ್ ಅವ ರು ಗೌಡಗೆರೆಗೆ ದೌಡಾಯಿಸಿ ಕಾರ್ಡ್ದಾರರ ಅಹವಾಲು ಆಲಿಸಿದರು. ಈ ಸಂದರ್ಭದಲ್ಲಿ ಕಾರ್ಡ್ದಾರರೇ ಸ್ಕೇಲ್ ತಂದು ಸೊಸೈಟಿಯವರು ತೂಗಿ ಕೊಟ್ಟಿರುವ ಅಕ್ಕಿ ಚೀಲವನ್ನು ಮತ್ತೆ ತೂಗಿ ತೂಕದಲ್ಲಿ ವಂಚಿಸಿರುವುದನ್ನು ತೋರಿಸಿದರು. ಅಲ್ಲದೆ ತಿಂಗಳಿಗೆ ಮರ‍್ನಲ್ಕು ದಿನಗಳು ಮಾತ್ರ ರೇಷನ್ ಕೊಡುತ್ತಾರೆ. ಅವರು ಕರೆದಾಗ ಹೋಗದಿದ್ದರೆ ಆ ತಿಂಗಳ ರೇಷನ್ ಕೊಡೋದಿಲ್ಲ. ಹಾಗಾಗಿ ಕೆಲಸ ಕಾರ್ಯ ಬಿಟ್ಟು ಮರ‍್ನಲ್ಕು ಕಿಮೀ ಬಿಸಿಲಿನಲ್ಲಿ ನಡೆದು ಬಂದು ರೇಷನ್ ತೆಗೆದುಕೊಂಡು ಹೋಗುತ್ತೇವೆ. ಆದರೆ ಹೀಗೆ ತೂಕದಲ್ಲಿ ಮೋಸ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರಲ್ಲದೆ ನಮ್ಮೂರಿಗೆ ಪ್ರತ್ಯೇಕ ಸೊಸೈಟಿ ಮಾಡಿಕೊಡಿ ಎಂದು ಒತ್ತಾಯಿಸಿದರು.
(Visited 1 times, 1 visits today)