ತುಮಕೂರು: ಸಮಾಜಮುಖಿ ನಾಯಕರಾದ ಎಲ್.ಜಿ.ಹಾವನೂರು ಅವರು ಶೋಷಿತ ಸಮುದಾಯಗಳ ಏಳಿಗೆಗೆ ಶ್ರಮಿಸಿದ್ದರು. ದೂರದೃಷ್ಟಿ ಚಿಂತನೆಯ ಅವರು ಹಿಂದುಳಿದ ವರ್ಗ, ಶೋಷಿತ ವರ್ಗಗಳಿಗೆ ಶಕ್ತಿ ತುಂಬಿದ್ದರು ಎಂದು ಹೇಳಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು, ಹಾವನೂರ ಕೊಡುಗೆ ಸ್ಮರಿಸಿದರು.
ವಾಲ್ಮೀಕಿ ಪತ್ತಿನ ಸಹಕಾರ ಸಂಘ, ಜಿಲ್ಲಾ ವಾಲ್ಮೀಕಿ ನೌಕರರ ಕ್ಷೇಮಾಭಿವೃದ್ಧಿ ಸಂಘ, ವಾಲ್ಮೀಕಿ ವಿದ್ಯಾವರ್ಧಕ ಸಂಘ, ಪ್ರಗತಿಪರ ವಕೀಲರ ವೇದಿಕೆ, ಶಬರಿ ಮಹಿಳಾ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಮಂಗಳವಾರ ನಗರದ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಎಲ್.ಜಿ.ಹಾವನೂರರ ನೂರನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ಮುಂದಿನ ವರ್ಷ ಹಾವನೂರರ ಜನ್ಮ ದಿನವನ್ನು ಅದ್ದೂರಿಯಾಗಿ ಆಚರಿಸೋಣ ಎಂದರು.
ಮುಖ್ಯಮAತ್ರಿ ದೇವರಾಜ ಅರಸು ಸರ್ಕಾರ ಸ್ಥಾಪಿಸಿದ್ದ ಹಿಂದುಳಿದ ವರ್ಗಗಳ ಆಯೋಗದ ಮುಖ್ಯಸ್ಥರಾಗಿದ್ದ ಎಲ್.ಜಿ.ಹಾವನೂರು ಅವರು ಕರ್ನಾಟಕದ ಹಿಂದುಳಿದ ವರ್ಗಗಳ ಅಧ್ಯಯನಾತ್ಮಕ ವರದಿ ರಚಿಸಿದ್ದರು. ಈ ವರದಿಯು ಹಿಂದುಳಿದ ವರ್ಗಗಳ ಒಂದು ವೈಜ್ಞಾನಿಕ ಅಧ್ಯಯನ ಎಂದು ಸುಪ್ರೀಂ ಕೋರ್ಟ್ನ ಪ್ರಶಂಸೆಗೂ ಪಾತ್ರವಾಗಿತ್ತು. ದೇವರಾಜ ಅರಸು ಅವರು ಈ ವರದಿಯನ್ನು ಹಿಂದುಳಿದ ವರ್ಗಗಳ ಬೈಬಲ್ ಎಂದು ಕರೆದಿದ್ದರು. ಈ ವರದಿ ತಯಾರಿಸಲು ಹಾವನೂರರು ವಿವಿಧ ಹಳ್ಳಿಗಳ ಮೂರು ಲಕ್ಷಕ್ಕೂ ಹೆಚ್ಚು ಜನರನ್ನು ಸಂದರ್ಶಿಸಿ ಮಾಹಿತಿ ಸಂಗ್ರಹಿಸಿದ್ದರು. ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಅವರು ತಮ್ಮ ದೇಶದ ಸಂವಿಧಾನ ರಚನಾ ಸಲಹಾ ಸಮಿತಿಗೆ ಎಲ್.ಜಿ.ಹಾವನೂರರನ್ನು ಆಹ್ವಾನಿಸಿದ್ದರು. ಹಾವನೂರು ಅವರ ಸಂವಿಧಾನ ಪ್ರಜ್ಞೆಗೆ ಇದೊಂದು ಸಾಕ್ಷಿಯಾಗಿದೆ ಎಂದು ಹೇಳಿದರು.
ಯುವಜನ ಸಹಕಾರ ಕ್ಷೇತ್ರಕ್ಕೆ ಬನ್ನಿ
ಸಹಕಾರ ಕ್ಷೇತ್ರವು ಜಾತಿ, ಪಕ್ಷ ಮೀರಿ ಬೆಳೆಯುತ್ತಿರುವ ಕ್ಷೇತ್ರ. ತಾನೂ ಬೆಳೆದು ಇತರರನ್ನು ಬೆಳೆಸುವ ಅವಕಾಶ ಸಹಕಾರ ಕ್ಷೇತ್ರದಲ್ಲಿದೆ. ಸಹಕಾರ ಕ್ಷೇತ್ರದಲ್ಲಿ ತೊಡಗಿಕೊಂಡವರು ಜನರ ಸಂಪರ್ಕ ಪಡೆಯಲು, ಸೇವೆ ಮಾಡಲು, ನಾಯಕತ್ವ ರೂಪಿಸಿಕೊಳ್ಳಲು ಅವಕಾಶವಿರುತ್ತದೆ. ಈ ಮೂಲಕ ರಾಜಕಾರಣ ಪ್ರವೇಶಕ್ಕೂ ಸುಲಭದ ದಾರಿಯಾಗಿದೆ. ಈಗಿನವರು ದಿಢೀರ್ ಅಧಿಕಾರ ಬಯಸುತ್ತಾರೆ. ಯುವ ಜನರು ಸಹಕಾರ ಕ್ಷೇತ್ರದಲ್ಲಿ ತೊಡಗಿಕೊಳ್ಳುವ ಮೂಲಕ ಜನರಿಗೆ ಸಹಾಯ ಮಾಡಿ, ಸಹಕಾರ ಪಡೆದು ರಾಜಕಾರಣದಲ್ಲಿ ಭವಿಷ್ಯ ಕಾಣಬಹುದು ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಮಾಜಿ ಮೇಯರ್, ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಜಿ.ಕೃಷ್ಣಪ್ಪ ಮಾತನಾಡಿ, ಕೆ.ಎನ್.ರಾಜಣ್ಣನವರು ನಮ್ಮ ಪಾಲಿನ ಎಲ್.ಜಿ.ಹಾವನೂರು, ಹಿಂದುಳಿದ ವರ್ಗ, ಶೋಷಿತ ಸಮುದಾಯಗಳ ಆಶಾಕಿರಣ. ಇವರಿಗೆ ಮುಖ್ಯ ಮಂತ್ರಿ ಸ್ಥಾನ ದೊರೆತರೆ ಹೆಚ್ಚು ಸಮರ್ಥವಾಗಿ ನಿರ್ವಹಿಸುತ್ತಾರೆ, ಅಂತಹ ಅವಕಾಶ ದೊರೆಯಲಿ ಎಂದು ಆಶಿಸಿದರು.
ಈ ಸಾಲಿನಲ್ಲಿ ಸಹಕಾರ ರತ್ನ ಪ್ರಶಸ್ತಿ ಪಡೆದ ವಿವಿಧ ಹಿರಿಯ ಸಹಕಾರಿಗಳನ್ನು ಈ ವೇಳೆ ಸನ್ಮಾನಿಸಲಾಯಿತು. ಮಾಜಿ ಶಾಸಕ ಗಂಗಹನುಮಯ್ಯ, ಜಿ.ಜೆ.ರಾಜಣ್ಣ, ಹನುಮಂತರಾಯಪ್ಪ, ಪಿ.ಮೂರ್ತಿ, ಹೆಬ್ಬಾಕ ಮಲ್ಲಿಕಾರ್ಜುನ್, ಲಕ್ಷಿö್ಮÃನಾರಾಯಣ, ಮೆಹಬೂಬ್ ಪಾಷಾ, ಬಿ.ಸಿ.ಉಮೇಶ್, ಟಿ.ಹೆಚ್.ಶಿವಾನಂದ್, ಜಿ.ಎಸ್.ರವಿ, ಗುರುಮೂರ್ತಿ ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪುರುಷೋತ್ತಮ್, ಪ್ರಗತಿಪರ ವಕೀಲರ ವೇದಿಕೆ ಅಧ್ಯಕ್ಷ ಸಿಂಗದಹಳ್ಳಿ ರಾಜ್‌ಕುಮಾರ್, ಹಿರಿಯ ಸಹಕಾರಿ ಹನುಮಂತರಾಯಪ್ಪ, ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮೊದಲಾದವರು ಭಾಗವಹಿಸಿದ್ದರು.
(Visited 1 times, 1 visits today)