ಹುಳಿಯಾರು: ದೀಪದ ಕೆಳಗೆ ಕತ್ತಲೆ ಎನ್ನುವಂತ್ತಾಗಿದೆ ಹುಳಿಯಾರು ಹೋಬಳಿಯ ತಿಮ್ಲಾಪುರ ಗ್ರಾಮ ಪಂಚಾಯ್ತಿ. ಈ ಪಂಚಾಯ್ತಿ ವ್ಯಾಪ್ತಿಗೆ ಹತ್ತಾರು ಹಳ್ಳಿಗಳು ಬರುತ್ತವಾದರೂ ಪಂಚಾಯ್ತಿ ಕಛೇರಿ ಇರುವ ನಿತ್ಯ ಪಿಡಿಒ, ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ ಓಡಾಡುವ ತಿಮ್ಲಾಪರ ಗ್ರಾಮದಲ್ಲೇ ಸ್ವಚ್ಛತೆ ಕಾಣದಾಗಿದೆ. ಪಂಚಾಯ್ತಿ ಸುತ್ತಮುತ್ತಲೇ ನೈರ್ಮಲ್ಯ ಕೊರತೆ ಎದ್ದು ಕಾಣುತ್ತಿರುವಾಗ ಉಳಿದ ಹಳ್ಳಿಗಳ ಸ್ವಚ್ಚತೆಯನ್ನು ನಿರೀಕ್ಷಿಸಬಹುದೇ ಎನ್ನುವಂತಾಗಿದೆ.
ತಿಮ್ಲಾಪುರ ಗ್ರಾಮ ಧಾರ್ಮಿಕವಾಗಿ ತಾಲೂಕಿನಾಧ್ಯಂತ ಪ್ರಸಿದ್ದಿ ಪಡೆದಿದೆ. ಇಲ್ಲಿ ಚಂದ್ರಮೌಳೇಶ್ವರ ಸ್ವಾಮಿ, ಕೊಲ್ಲಾಪುರದಮ್ಮ, ಆಂಜನೇಯಸ್ವಾಮಿ ಹೀಗೆ ವಿವಿಧ ದೇವರುಗಳ ಧಾರ್ಮಿಕ ಕಾರ್ಯಕ್ರಮಗಳು ಆಗಾಗ ನೆರವೇರುತ್ತಿರುತ್ತವೆ. ಆ ಸಂದರ್ಭದಲ್ಲಿ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವದಿಂದ ನೆರವೇರುತ್ತವೆ. ಪರಿಣಾಮ ಸುತ್ತಮುತ್ತಲ ಹಳ್ಳಿಗಳ ಸವಿರಾರು ಜನರು ಬರುತ್ತಾರೆ. ಇಲ್ಲಿನ ಅಂಚೆ ಕಛೇರಿಗೆ ಹೊಸಹಳ್ಳಿ, ಹೊಸಹಳ್ಳಿಪಾಳ್ಯ, ಸೀಗೆಬಾಗಿ, ತೊರೆಮನೆ ಗ್ರಾಮಗಳ ಜನರು ನಿತ್ಯ ಬಂದೋಗುತ್ತಾರೆ. ಗ್ರಾಪಂ ಕಛೇರಿಗಂತೂ ಹತ್ತಾರು ಹಳ್ಳಿಗಳ ಜನರು ನಿತ್ಯ ಬರುತ್ತಿರುತ್ತಾರೆ.
ಹೀಗೆ ಸುತ್ತಮುತ್ತಲ ಹಳ್ಳಿಗಳು ಬಂದೋಗುವ ಊರಿನ ಸ್ವಚ್ಚತೆಗೆ ಗ್ರಾಪಂ ಮೊದಲ ಆಧ್ಯತೆ ನೀಡಬೇಕಿದೆ. ಆದರೆ ಬಹುತೇಕ ಕಡೆ ಚರಂಡಿ ಇಲ್ಲ. ಕೆಲವು ಕಡೆ ಇದ್ದರೂ ಸೂಕ್ತ ನಿರ್ವಹಣೆ ಇಲ್ಲದಂತಾಗಿದೆ. ಕಸ-ಕಡ್ಡಿಗಳಿಂದ ಚರಂಡಿಗಳು ತುಂಬಿದ್ದರೂ ಸ್ವಚ್ಛಗೊಳಿಸುವ ಕೆಲಸ ಮಾತ್ರ ಮಾಡುತ್ತಿಲ್ಲ. ಮಳೆ ಬಂದಾಗ ಚರಂಡಿಗಳಲ್ಲಿ ನೀರು ನಿಂತು ಕಸ ಕಡ್ಡಿ ಕೊಳೆತು ನಾರುತ್ತದೆ. ಕೊಚ್ಚೆ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಜನರು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಾರೆ. ಚರಂಡಿಗಳ ಕೊಳಚೆ ನೀರು ರಸ್ತೆಗೆ ಹರಿಯುವುದು ಮಾಮೂಲಿಯಾಗಿದೆ. ಆದರೂ ಗ್ರಾಪಂ ಕಣ್ಣುಮುಚ್ಚಿ ಕುಳಿತಿದೆ ಎನ್ನುವುದು ಗ್ರಾಮದ ಗೌರಮ್ಮ, ಭಾಗ್ಯಮ್ಮ, ಗೀತಮ್ಮನ ಆರೋಪವಾಗಿದೆ.
ಕೆಲವು ಕಡೆ ಚರಂಡಿಗಳು ಇದ್ದರೂ ಮುಚ್ಚಿಹೋಗಿವೆ. ಮನೆಗಳ ಬಚ್ಚಲುಗಳ ನೀರು, ಪಾತ್ರೆ, ಬಟ್ಟೆ ತೊಳೆದ ಅಶುದ್ಧ ನೀರು ರಸ್ತೆ ಮೇಲೆ ಹರಿಯುವಂತಾಗಿದೆ. ರಸ್ತೆಯ ಮೇಲೆ ಎಲ್ಲೆಂದರಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದೆ. ದೇವರ ಉತ್ಸವದಲ್ಲಿ ಭಕ್ತರು ಮೂಗು ಮುಚ್ಚಿಕೊಂಡು ಉತ್ಸವ ನೋಡಬೇಕಿದೆ. ಮಡಿಯಿಂದ ಬರುವ ಭಕ್ತರು ಚರಂಡಿ ನೀರು ತುಳಿಯುವುದನ್ನು ತಪ್ಪಿಸಲು ಸರ್ಕಸ್ ಮಾಡಬೇಕಿದೆ. ಒಟ್ಟಾರೆ ಸ್ವಚ್ಛತೆ ವಿಚಾರದಲ್ಲಿ ಗ್ರಾಮ ಪಂಚಾಯಿತಿಯ ನಿರ್ಲಕ್ಷ÷್ಯದಿಂದ ಜನರು ಹೈರಾಣಾಗಿದ್ದಾರೆ.
ಸ್ವಚ್ಛತೆಗೆ ೧೫ ನೇ ಹಣಕಾಸು ಯೋಜನೆಯಲ್ಲಿ ಹಣ ಖರ್ಚು ಮಾಡಬಹುದಾಗಿದೆ. ಕನಿಷ್ಟ ೩ ತಿಂಗಳಿಗೊಮ್ಮೆಯಾದರೂ ಚರಂಡಿಗಳ ಸ್ವಚ್ಛತೆ ಮಾಡಬೇಕಿದೆ. ಆದರೆ ೨ ವರ್ಷಗಳೇ ಕಳೆದರೂ ಚರಂಡಿ ಸ್ವಚ್ಚ ಮಾಡಿಲ್ಲದಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸ್ವಚ್ಚ ಮಾಡಿಲ್ಲವಾದ್ದರಿಂದ ೧೫ ನೇ ಹಣಕಾಸಿನ ಹಣ ಏನಾಯಿತು ಕಳ್ಳಬಿಲ್ಲು ಮಾಡಿಕೊಂಡು ಲಪಟಾಯಿಸಿದ್ದಾರೆಯೇ ಎನ್ನುವ ಪ್ರಶ್ನೆ ಉದ್ಭವಿಸುತ್ತಿದೆ. ಅಲ್ಲದೆ ನೈರ್ಮಲ್ಯ ಕಾಪಾಡಲು ಸರಬರಾಜು ಆಗುವ ಫೆನಾಯಿಲ್ ಯಾರ ಮನೆ ಸೇರುತ್ತಿದೆ ಎನ್ನುವುದು ತಿಳಿಯದಾಗಿದೆ ಎನ್ನುತ್ತಾರೆ ಈ ಗ್ರಾಮದ ಯುವಕ ನವೀನ್.
ಪ್ರತಿ ವರ್ಷ ಮಲೇರಿಯ ಮಾಸಾಚರಣೆಯಲ್ಲಿ ಆಶಾ ಕಾರ್ಯಕರ್ತೆಯರು ಗ್ರಾಮಗಳಲ್ಲಿ ಸ್ವಚ್ಛತೆಯ ಬಗ್ಗೆಯೂ ಮಾರ್ಗದರ್ಶನ ನೀಡುತ್ತಾರೆ. ಗ್ರಾಮಗಳಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಜಾಥಾ ನಡೆಸುತ್ತಾರೆ. ಆದರೆ ಗ್ರಾಮಗಳಲ್ಲಿ ಚರಂಡಿಗಳ ಸ್ವಚ್ಛತೆ ಯಾರೊಬ್ಬರೂ ಆಧ್ಯತೆ ಕೊಡುತ್ತಿಲ್ಲ. ಇನ್ನಾದರೂ ಗ್ರಾಮ ಪಂಚಾಯ್ತಿ ಮತ್ತು ಆರೋಗ್ಯ ಇಲಾಖೆ ಚರಂಡಿ ಸ್ವಚ್ಚತೆಗೆ ಒತ್ತು ಕೊಟ್ಟು ಇಲ್ಲಿನ ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗದಂತೆ ಕ್ರಮ ಕೈಗೊಳ್ಳಲು ಜನರು ಒತ್ತಾಯಿಸಿದ್ದಾರೆ.
ಮನವಿ ಕೊಟ್ಟು ಕೊಟ್ಟು ಸಾಕಾಗಿದೆ:
ಊರಿನ ಚರಂಡಿ ಸ್ವಚ್ಚ ಮಾಡಿ ಎಂದು ಗ್ರಾಮ ಪಂಚಾಯ್ತಿಗೆ ಮನವಿ ಕೊಟ್ಟು ಕೊಟ್ಟು ಸಾಕಾಗಿ ಹೋಗಿದೆ. ಅಧ್ಯಕ್ಷರು, ಪಿಡಿಒ ಮೇಲೆ, ಪಿಡಿಒ ಸದಸ್ಯರ ಮೇಲೆ ಹೇಳಿ ದಿನ ದೂಡುತ್ತಿದ್ದಾರೆ ವಿನಹ ಸ್ವಚ್ಚಗೊಳಿಸಲು ಮುಂದಾಗುತ್ತಿಲ್ಲ. ಇಲ್ಲಿನ ಚರಂಡಿಯ ದುರ್ನಾತ ಹಾಗೂ ಸೊಳ್ಳೆಗಳ ಕಾಟ ನೋಡಿ ಪಂಚಾಯ್ತಿಗೆ ಹಿಡಿ ಶಾಪ ಹಾಕಿ ವಾಸಿಸುತ್ತಿದ್ದೇವೆ. ದಾರ್ಮಿಕ ಕಾರ್ಯಗಳಿಗೆ ಬರುವ ಅಕ್ಕಪಕ್ಕದ ಊರಿನ ಜನರು ಪಂಚಾಯ್ತಿಗೆ ಹೇಳಿ ಕ್ಲೀನ್ ಮಾಡಿಸೋದಲ್ವೇನ್ರಿ ಎನ್ನುತ್ತಾರೆ. ಆದರೆ ಕ್ಲೀನ್ ಮಾಡಿ ಎಂದರೆ ಪಂಚಾಯ್ತಿಯವರು ಸ್ಪಂಧಿಸುವುದಿಲ್ಲ.
ನವೀನ್, ನಿವಾಸಿ, ತಿಮ್ಲಾಪುರ
ಸದಸ್ಯರಿಗೆ ಕ್ಲೀನ್ ಮಾಡಲು ಹೇಳಿದ್ದೇನೆ
ತಿಮ್ಲಾಪುರ ಗ್ರಾಮದ ಚರಂಡಿ ಸ್ವಚ್ಚತೆಗೆ ಅಲ್ಲಿನ ಇಬ್ಬರು ಗ್ರಾಪಂ ಸದಸ್ಯರಿಗೆ ಹೇಳಿದ್ದೇನೆ. ೧೫ ನೇ ಹಣಕಾಸಿನಲ್ಲಿ ದುಡ್ಡು ಕೊಡುತ್ತೇನೆ ಎಂದಿದ್ದೇನೆ, ಎಷ್ಟು ಹೇಳಿದರೂ ಕೇಳುತ್ತಿಲ್ಲ. ಈಗ ಕ್ಲೀನ್ ಮಾಡಿಸುತ್ತೇವೆ, ಆಗ ಕ್ಲೀನ್ ಮಾಡಿಸುತ್ತೇನೆ ಎಂದು ಇಬ್ಬರೂ ಓಡಾಡುತ್ತಾರೆಯದರೂ ಕ್ಲೀನ್ ಮಾಡಿಸಿಲ್ಲ. ನಮಗೂ ಕ್ಲೀನ್ ಮಾಡಿಸಲು ಬಿಡಲ್ಲ. ಅವರೂ ಕ್ಲೀನ್ ಮಾಡಿಸಲ್ಲ. ಇನ್ನೆರಡು ದಿನಗಳ ಅಂತಿಮ ಗಡುವು ಕೊಡುತ್ತೇನೆ. ಅವರು ಕ್ಲೀನ್ ಮಾಡಿಸದಿದ್ದರೆ ನಾನೇ ಮುಂದೆ ನಿಂತು ಕ್ಲೀನ್ ಮಾಡಿಸುತ್ತೇನೆ.
ಚಿಕ್ಕಣ್ಣ, ಪಿಡಿಒ, ತಿಮ್ಲಾಪುರ ಪಂಚಾಯ್ತಿ