ತುಮಕೂರು :
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ಸಾಲ ಸೌಲಭ್ಯದ ನೆರವು ಪಡೆದು ಬೃಹತ್ ಉದ್ದಿಮೆದಾರರಾಗಬೇಕೆಂದು ಜಿಲ್ಲಾ ವಾಣಿಜ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಕರೆ ನೀಡಿದರು.
ರಾಜ್ಯ ಹಣಕಾಸು ಸಂಸ್ಥೆ ಜಿಲ್ಲಾ ಕಚೇರಿ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಇತ್ತೀಚೆಗೆ ಡಿಐಸಿ ಸಭಾಂಗಣದಲ್ಲಿ ಏರ್ಪಡಿಸಿದ್ದ “ಉದ್ದಿಮೆದಾರರ ಸಮಾವೇಶ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಥೆಯಿಂದ ತಾವು ಪಡೆದ ಸಾಲ ಸೌಲಭ್ಯದ ನೆರವಿನ ಬಗ್ಗೆ ಅನುಭವವನ್ನು ಹಂಚಿಕೊಂಡರು. ಉದ್ದಿಮೆದಾರರು ಕಡಿಮೆ ಬಡ್ಡಿ ದರದಲ್ಲಿ ದೊರೆಯುವ ಸಾಲ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಕಾರಣೀಭೂತರಾಗಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಲ್. ನಾಗರಾಜು ಮಾತನಾಡಿ, ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಕೈಗಾರಿಕೋದ್ಯಮಿಗಳಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕೆಎಸ್‍ಎಫ್‍ಸಿ ಪ್ರಧಾನ ವ್ಯವಸ್ಥಾಪಕ ಜಿ.ವಿ.ಚಂದ್ರಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಹಣಕಾಸು ಸಂಸ್ಥೆಯ ಚಟುವಟಿಕೆ ಹಾಗೂ ಹಣಕಾಸು ವಹಿವಾಟುಗಳ ಬಗ್ಗೆ ಮಾಹಿತಿ ನೀಡಿದರಲ್ಲದೆ ಸಂಸ್ಥೆಯಲ್ಲಿ ಚಾಲ್ತಿಯಲ್ಲಿರುವ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆ, ಸೇವಾ ಕ್ಷೇತ್ರಗಳ ಸ್ಥಾಪನೆ, ವಿಸ್ತರಣೆ, ಆಧುನೀಕರಣಕ್ಕೆ ಲಭ್ಯವಿರುವ ವಿವಿಧ ಯೋಜನೆಗಳ ಕುರಿತು ವಿವರಿಸಿದರು. ವಿಶೇಷವಾಗಿ ಪ.ಜಾತಿ ಮತ್ತು ಪಂಗಡಗಳ ಉದ್ದಿಮೆದಾರರು, ಮಹಿಳಾ ಉದ್ದಿಮೆದಾರರು, ಹೊಸ ಕೈಗಾರಿಕಾ ಘಟಕಗಳಿಗೆ ಉಪಯೋಗಿಸುವ ಕಟ್ಟಡ ಮತ್ತು ಯಂತ್ರೋಪಕರಣಗಳ ಅಳವಡಿಕೆಗಾಗಿ ಲಭ್ಯವಿರುವ ಶೇ. 4ರ ನಿವ್ವಳ ಬಡ್ಡಿ ದರ ಯೋಜನೆ ಕುರಿತು ತಿಳಿಸಿದರು.
ವಸಂತ ನರಸಾಪುರ ಕೈಗಾರಿಕಾ ಪ್ರದೇಶ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಶಿವಶಂಕರ್ ಹಾಗೂ ಬೆಂಗಳೂರಿನ ಎಫ್.ಕೆ.ಸಿ.ಸಿ.ಐ. ನಿರ್ದೇಶಕ ಸುಜ್ಞಾನ ಹಿರೇಮಠ್ ಮಾತನಾಡಿ, ಕೈಗಾರಿಕೆಗಳು ಎದುರಿಸುತ್ತಿರುವ ಕಷ್ಟ ನಷ್ಟಗಳ ಬಗ್ಗೆ ವಿವರಿಸಿದರಲ್ಲದೆ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕೈಗಾರಿಕೆಗಳ ಅಭಿವೃದ್ಧಿಗಾಗಿ ನೀಡುತ್ತಿರುವ ವಿಶೇಷ ಸವಲತ್ತುಗಳನ್ನು ಬಳಸಿಕೊಂಡು ಕೈಗಾರಿಕೆಗಳನ್ನು ಲಾಭದಾಯಕವಾಗಿ ನಡೆಸಿಕೊಂಡು ಹೋಗಬೇಕೆಂದು ತಿಳಿಸಿದರು.
ಕುಣಿಗಲ್ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಜಯರಾಮಯ್ಯ, ಕೆಎಸ್‍ಎಫ್‍ಸಿ ಪ್ರಧಾನ ವ್ಯವಸ್ಥಾಪಕ ಜಿ.ವಿ. ಚಂದ್ರಕುಮಾರ್, ಉಪ ಪ್ರಧಾನ ವ್ಯವಸ್ಥಾಪಕ ಅಶೋಕ್ ಹೆಚ್. ಕುರಣಿ, ಸಹಾಯಕ ವ್ಯವಸ್ಥಾಪಕ ವೆಂಕಟೇಶ್ ಜೋಯಿಸ್, ಉಪ ವ್ಯವಸ್ಥಾಪಕ ಸಂಪತ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು. ಸುಮಾರು 100 ಹಾಲಿ ಹಾಗೂ ಭಾವಿ ಉದ್ಯಮಿಗಳು ಸಮಾವೇಶದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು.