ತುಮಕೂರು: ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರು ಬುಧವಾರ ನಗರದ ಬಟವಾಡಿ, ಬಡ್ಡಿಹಳ್ಳಿ ಹಾಗೂ ಮೈದಾಳ ರೈಲ್ವೆ ಗೇಟ್ ಬಳಿ ರೋಡ್ ಓವರ್ ಬ್ರಿಡ್ಜ್(ಆರ್‌ಓಬಿ) ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಮೈದಾಳದಲ್ಲಿ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದ ಅವರು ನಗರದಲ್ಲಿ ೧೨೭.೪೩ ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ಹಾಗೂ ಕೆಳ ಸೇತುವೆ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರೈಲ್ವೆ ಮೇಲ್ಸೇತುವೆ ಹಾಗೂ ಕೆಳ ಸೇತುವೆ ನಿರ್ಮಾಣ ಮಾಡುವುದರಿಂದ ದ್ವಿಚಕ್ರ ವಾಹನ ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ರೋಡ್ ಓವರ್ ಬ್ರಿಡ್ಜ್ ನಿರ್ಮಾಣಕ್ಕಾಗಿ ಬಟವಾಡಿ ರೈಲ್ವೆ ಗೇಟ್(ಎಲ್.ಸಿ ೩೯) ಬಳಿ ೪೩.೩೭ ಕೋಟಿ ರೂ., ಬಡ್ಡಿಹಳ್ಳಿ ಗೇಟ್(ಎಲ್.ಸಿ ೩೮)ಬಳಿ ೨೬.೭೫ ಕೋಟಿ ರೂ. ಹಾಗೂ ಮೈದಾಳ ಗೇಟ್ ಬಳಿ(ಎಲ್.ಸಿ ೩೫) ೫೭.೩೧ ಕೋಟಿ ರೂ. ಸೇರಿ ಒಟ್ಟು ೧೨೭.೪೩ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಮುಂದಿನ ೧೮ ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯದಲ್ಲಿ ೧೯೦೦ ಕೋಟಿ ರೂ. ವೆಚ್ಚದಲ್ಲಿ ೬೧ ಅಮೃತ್ ಭಾರತ್ ರೈಲ್ವೆ ಸ್ಟೇಷನ್‌ಗಳ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ೧೬ ಕೋಟಿ ರೂ. ವೆಚ್ಚದಲ್ಲಿ ಗುಬ್ಬಿ ಹಾಗೂ ೨೪ ಕೋಟಿ ರೂ. ವೆಚ್ಚದಲ್ಲಿ ತಿಪಟೂರು ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲಾಗುವುದು. ಅಲ್ಲದೆ ೮೯ ಕೋಟಿ ರೂ. ವೆಚ್ಚದಲ್ಲಿ ನಗರದ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಡಾ: ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ನಗರದ ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ತಿಳಿಸಿದರು.
ಭಾರತದ ರೈಲ್ವೆ ವ್ಯವಸ್ಥೆಯನ್ನು ಮತ್ತಷ್ಟು ಆಧುನೀಕರಿಸುವ ಹಾಗೂ ರೈಲ್ವೆ ಪ್ರಯಾಣಿಕರಿಗೆ ಉತ್ತಮ ಸೇವೆ ಮತ್ತು ಸುರಕ್ಷತೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಮಾತನಾಡಿ ವಿ. ಸೋಮಣ್ಣ ತುಮಕೂರಿನ ಲೋಕಸಭಾ ಸದಸ್ಯ ಮತ್ತು ಕೇಂದ್ರದ ಸಚಿವರಾಗಿ ಅಧಿಕಾರ ವಹಿಸಿಕೊಂಡ ೬ ತಿಂಗಳೊಳಗಾಗಿ ನೂರಾರು ಕೋಟಿ ರೂ. ಗಳ ಅನುದಾನವನ್ನು ನಗರದ ಅಭಿವೃದ್ಧಿಗೆ ತಂದುಕೊಟ್ಟಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮಾಂತರ ಶಾಸಕ ಸುರೇಶ್ ಗೌಡ, ಮಹಾನಗರ ಪಾಲಿಕೆ ಆಯುಕ್ತ ಬಿ.ವಿ ಅಶ್ವಿಜ, ತುಮಕೂರು ತಹಶೀಲ್ದಾರ್ ರಾಜೇಶ್ವರಿ, ನೈರುತ್ಯ ರೈಲ್ವೆ ನಿರ್ಮಾಣದ ಮುಖ್ಯ ಆಡಳಿತ ಅಧಿಕಾರಿ ಅಜಯ್ ಶರ್ಮ, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಮಿತೇಶ್ ಕುಮಾರ್ ಸಿನ್ಹಾ, ಅಪರ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್ ಪುರಿಯ, ಮುಖ್ಯ ಇಂಜಿನಿಯರ್ ನೈರುತ್ಯ ರೈಲ್ವೆ ನಿರ್ಮಾಣ ಅಧಿಕಾರಿ ಪ್ರದೀಪ್ ಪೂರಿ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೈ.ಹೆಚ್. ಹುಚ್ಚಯ್ಯ, ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.