ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯಲ್ಲಿ ಸ್ಥಗಿತತೆ ಆಗಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕೇಂದ್ರ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಈ ಕುರಿತು ಕೂಡಲೆ ತನಿಖೆ ಮಾಡಬೇಕು ಎಂದು ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರಭು ಅವರಿಗೆ ಆ ದೇಶಿಸಿದರು.
ಸ್ಥಳೀಯ ಶಾಸಕ ಬಿ. ಸುರೇಶ ಗೌಡರ ಅವರ ಮನವಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಇಂಥ ಯೋಜನೆಗಳು ಸರಿಯಾದ ನಿರ್ವಹಣೆ ಇಲ್ಲದೆ ಸ್ಥಗಿತಗೊಂಡರೆ ಭೂಮಿಯ ಮೇಲಿನ ನೀರು ಪೂರೈಕೆಯ ಸಿದ್ಧಾಂತಕ್ಕೇ ಅಪಚಾರ ಮಾಡಿದಂತೆ ಎಂದು ಅಭಿಪ್ರಾಯಪಟ್ಟರು.
ನಾಗವಲ್ಲಿಯೂ ಸೇರಿದಂತೆ ಐದು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಲವಾರು ಹಳ್ಳಿಗಳಿಗೆ ಶುದ್ಧ ನೀರು ಪಂಪ್ ಮಾಡುವ ಹೆಬ್ಬೂರು-ಗೂಳೂರು ಏತ ನೀರಾವರಿ ಯೋಜನಾ ಸ್ಥಳಕ್ಕೆ ಅವರು ಶಾಸಕರ ಜತೆಗೆ ಭೇಟಿ ನೀಡಿದರು.
ಈ ಯೋಜನೆ ಸ್ಥಗಿತಗೊಂಡುದಕ್ಕೆ ಕಾರಣ ಏನೇ ಇರಲಿ. ಇಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೇ ಇರುವುದು ಎದ್ದು ಕಾಣುತ್ತದೆ. ಈ ಕುರಿತು ಒಂದು ತಿಂಗಳಲ್ಲಿ ತಮಗೆ ವರದಿ ಸಲ್ಲಿಸಬೇಕು. ಕೇಂದ್ರ ಜಲಜೀವನ ಮಿಷನ್‌ನಿಂದ ಏನಾದರೂ ಹಣದ ಸಹಾಯ ಬೇಕಾದರೆ ಒದಗಿಸಲು ತಾವು ಸಿದ್ಧ ಎಂದು ಅವರು ಭರವಸೆ ನೀಡಿದರು.
ಈ ಸಮಯದಲ್ಲಿ ತಾವು ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಪಟ್ಟಿರುವ ಶ್ರಮದ ಕುರಿತು ಸುರೇಶಗೌಡರು ಸಚಿವರ ಗಮನಕ್ಕೆ ತಂದರು. ಈ ಯೋಜನೆಯನ್ನು ಮರಳಿ ಸುಸ್ಥಿತಿಗೆ ತರಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೋ ಅದನ್ನು ಕೂಡಲೇ ತೆಗೆದುಕೊಳ್ಳಬೇಕು ಎಂದು ಸಚಿವ ಸೋಮಣ್ಣ ಸೂಚಿಸಿದರು.
ಈ ಸಮಯದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಅವರು ಅಲ್ಲದೆ, ಹೇಮಾವತಿ ನೀರಾವರಿ ಯೋಜನೆಯ ಮತ್ತು ಜಲಜೀವನ್ ಮಿಷನ್ ಇಲಾಖೆಯ ಎಂಜಿನಿಯರುಗಳು ಉಪಸ್ಥಿತರಿದ್ದರು.
(Visited 1 times, 1 visits today)