ತುಮಕೂರು: ಜಿಲ್ಲೆಯ ಗುಬ್ಬಿ ತಾಲ್ಲೂಕು ನಿಟ್ಟೂರು ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ೫೮ ಹಾಗೂ ತಿಪಟೂರಿನ ಶಾರದಾ ನಗರದಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ೮೬ ಬದಲಿಗೆ ೧೩೯ ಕೋಟಿ ರೂ. ವೆಚ್ಚದಲ್ಲಿ ರೋಡ್ ಓವರ್ ಬ್ರಿಡ್ಜ್ (ರಸ್ತೆ ಮೇಲ್ಸೇತುವೆ) ಹಾಗೂ ಸೀಮಿತ ಎತ್ತರದ ಸಬ್ ವೇಗಳ ನಿರ್ಮಾಣಕ್ಕೆ ಗುರುವಾರ ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಶಂಕುಸ್ಥಾಪನೆ ನೆರವೇರಿಸಿದರು.
ತಿಪಟೂರಿನಲ್ಲಿ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದ ಅವರು ಬಹು ವರ್ಷಗಳಿಂದ ಬೇಡಿಕೆ ಇದ್ದ ರೈಲ್ವೆ ಯೋಜನೆಗಳ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಗುತ್ತಿದ್ದು, ತಿಪಟೂರಿನ ಶಾರದಾ ನಗರದಲ್ಲಿ ೮೯.೩೨ ಕೋಟಿ ರೂ. ಹಾಗೂ ಗುಬ್ಬಿ ತಾಲೂಕಿನ ನಿಟ್ಟೂರು ರೈಲ್ವೆ ನಿಲ್ದಾಣದಲ್ಲಿ ೫೦.೫೭ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಮೇಲ್ಸೇತುವೆ ಹಾಗೂ ಸಬ್ ವೇ ನಿರ್ಮಾಣವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸುಮಾರು ೨೦ ರಸ್ತೆ ಮೇಲ್ಸೇತುವೆ ಹಾಗೂ ಕೆಳ ಸೇತುವೆ ನಿರ್ಮಾಣ ಕಾಮಗಾರಿ ಹಮ್ಮಿಕೊಂಡಿದ್ದು, ಪ್ರಸ್ತುತ ೧೦ ಕಾಮಗಾರಿಗಳಿಗೆ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ಸುಮಾರು ೪೨೦೫ ಕೋಟಿ ರೂ. ವೆಚ್ಚದಲ್ಲಿ ತುಮಕೂರು-ರಾಯದುರ್ಗ(೨೦೭ ಕಿಲೋ ಮೀಟರ್) ಹಾಗೂ ತುಮಕೂರು-ಚಿತ್ರದುರ್ಗ- ದಾವಣಗೆರೆ(೧೯೧ ಕಿಲೋ ಮೀಟರ್)ಯ ರೈಲು ಮಾರ್ಗದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ಶುದ್ಧ ಕುಡಿಯುವ ನೀರೊದಗಿಸುವ ಜಲ್ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಗೆ ೪ ಲಕ್ಷ ಕೋಟಿ ರೂ. ಗಳ ಅನುದಾನವನ್ನು ನೀಡಿದ್ದು, ಇನ್ನೆರಡು ತಿಂಗಳೊಳಗಾಗಿ ಜಿಲ್ಲೆಯ ಪ್ರತಿ ಹಳ್ಳಿ-ಹಳ್ಳಿಗೂ ಶುದ್ಧ ಕುಡಿಯುವ ನೀರು ಒದಗಿಸಿ ರಾಜ್ಯದಲ್ಲೇ ತುಮಕೂರು ಮೊದಲನೇ ಸ್ಥಾನ ಪಡೆದುಕೊಳ್ಳಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸಿ. ನಾಗೇಶ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ವೈ.ಹೆಚ್. ಹುಚ್ಚಯ್ಯ, ಗುಬ್ಬಿ ತಹಶೀಲ್ದಾರ್ ಆರತಿ, ತಿಪಟೂರು ತಹಶೀಲ್ದಾರ್ ಪವನ್ ಕುಮಾರ್, ನೈರುತ್ಯ ರೈಲ್ವೆ ನಿರ್ಮಾಣ ಮುಖ್ಯ ಆಡಳಿತಾಧಿಕಾರಿ ಅಜಯ್ ಶರ್ಮ, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಮಿತೇಶ್ ಕುಮಾರ್ ಸಿನ್ಹಾ, ಅಪರ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್ ಪುರಿಯ, ಮೈಸೂರಿನ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಮುದಿತ್ ಮಿತ್ತಲ್, ನೈರುತ್ಯ ರೈಲ್ವೆ ನಿರ್ಮಾಣ ಮುಖ್ಯ ಇಂಜಿನಿಯರ್ ಪ್ರದೀಪ್ ಪುರಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
(Visited 1 times, 1 visits today)