ಮಂಗಳೂರು:
ನಗರದ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಪ್ರವಾಚಕ (ರೀಡರ್) ಮಂಜುನಾಥಯ್ಯ ಅಕ್ರಮ ಆಸ್ತಿ ಹೊಂದಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಅಧಿಕಾರಿಗಳು ಮಂಗಳೂರು ಮತ್ತು ಉಡುಪಿಯಲ್ಲಿ ದಾಳಿ ನಡೆಸಿದ್ದಾರೆ.
ಮಂಜುನಾಥಯ್ಯ ಅಕ್ರಮ ಆಸ್ತಿ ಹೊಂದಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಉಡುಪಿಯ ವಾಸದ ಮನೆ, ದಾವಣಗೆರೆ, ಚಿಕ್ಕಮಗಳೂರಿನಲ್ಲಿರುವ ಸಂಬಂಧಿಕರ ಮನೆ, ಅಧಿಕಾರಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಕಚೇರಿಗೆ ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಎಸಿಬಿ ಇನ್‌ಸ್ಪೆಕ್ಟರ್ ಯೋಗೀಶ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಕಚೇರಿಯಲ್ಲಿರುವ ಹಲವು ಕಡತಗಳನ್ನು ಪರಿಶೀಲಿಸಿ, ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಜುನಾಥಯ್ಯ ಮೂರು ತಿಂಗಳ ಹಿಂದೆ ನಗರದಲ್ಲಿರುವ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯಕ್ಕೆ ಪ್ರವಾಚಕರಾಗಿ ಬಂದಿದ್ದರು.ಆದರೆ ಒಂದೂವರೆ ತಿಂಗಳಿನಿಂದ ಕೆಲಸಕ್ಕೆ ಬಾರದೆ ತುರ್ತು ರಜೆ ಹಾಕಿದ್ದರು. ಬಿಎಡ್ ಕಾಲೇಜಿನಲ್ಲಿ ಕೆಲಸ ಮಾಡಲು ಇಷ್ಟವಿಲ್ಲದ ಈ ವ್ಯಕ್ತಿ ಬಂದ ಒಂದು ತಿಂಗಳಲ್ಲೇ ವರ್ಗಾವಣೆಗೆ ಪ್ರಯತ್ನ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.